ಸಾಮಾನ್ಯವಾಗಿ ಕೋಳಿ ಬಿಳಿ ಮೊಟ್ಟೆ ಇಟ್ಟಿರೋದನ್ನ ನೋಡಿರ್ತೀರ, ಇಲ್ಲ ಕೇಳಿರ್ತೀರ ಆದ್ರೆ ಒಬ್ಬ ಸಾಮಾನ್ಯ ರೈತ ಸಾಕಿದ ನಾಟಿಕೋಳಿ ‘ನೀಲಿ ಮೊಟ್ಟೆ’ ಇಟ್ಟು ಎಲ್ಲರ ಗಮನ ಸೆಳೆದಿದೆ. ದಾವಣಗೆರೆ ಜಿಲ್ಲೆಯ ಮನೆಯೊಂದರಲ್ಲಿ ಅಚ್ಚರಿಯ ಘಟನೆ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ಮನೆಗೆ ಇದೀಗ ಫೇಮಸ್ ಆಗ ತೊಡಗಿದೆ. ಕಾರಣ, ಅವರು ಸಾಕಿದ ನಾಟಿ ಕೋಳಿಗಳಲ್ಲಿ ಒಂದು ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸೈಯದ್ ನೂರ್ ತಮ್ಮ ಮನೆಯಲ್ಲಿ ಸುಮಾರು ಹತ್ತು ನಾಟಿ ಕೋಳಿಗಳನ್ನು ಸಾಕಿದ್ದಾರೆ. ಇವುಗಳು ಸಾಮಾನ್ಯವಾಗಿ ಬಿಳಿ ಬಣ್ಣದ ಮೊಟ್ಟೆ ಇಡುತ್ತಿವೆ. ಆದರೆ, ಇತ್ತೀಚೆಗೆ ಇದರಲ್ಲಿ ಒಂದು ಕೋಳಿ ನೀಲಿ ಬಣ್ಣದ ಮೊಟ್ಟೆ ಇಡುವ ಮೂಲಕ ಅಚ್ಚರಿಗೊಳಿಸಿದೆ. ಮೊಟ್ಟೆಯ ಮೇಲ್ಭಾಗ ಮಾತ್ರ ನೀಲಿ ಬಣ್ಣದಲ್ಲಿ ಕಂಡುಬಂದಿದ್ದು, ಉಳಿದ ಭಾಗ ಸಾಮಾನ್ಯ ಮೊಟ್ಟೆಯಂತೆ ಇದೆ.
ಈ ಬೆಳವಣಿಗೆಯ ಬಗ್ಗೆ ತಿಳಿದ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೊಟ್ಟೆ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಶೋಕ ಅವರು, ಈ ಕೋಳಿಯ ಮೊಟ್ಟೆಗೆ ನೀಲಿ ಬಣ್ಣ ಬರಲು ಮೆದೋಜೀರಕಾಂಗದಲ್ಲಿ ಉಂಟಾಗುವ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಒಂದು ವೇಳೆ ಕೋಳಿ ಮುಂದೆ ನಿರಂತರವಾಗಿ ನೀಲಿ ಮೊಟ್ಟೆ ಹಾಕಿದರೆ ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಕೂಡ ತಿಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.