ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಯ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿ ಮೃತರ ಸಂಬಂಧಿಕರ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಪಡೆಯುತ್ತಿದೆ.
ಅಲ್ಲದೆ ಘಟನೆಗೆ ಸಂಬಂಧಿಸಿರುವ ವಿವರಗಳನ್ನು ಕಲೆ ಹಾಕುತ್ತಿದೆ. ಇನ್ನೂ ಘಟನೆ ನಡೆದ ಬಳಿಕ ಸ್ಥಳೀಯ ಕಾಶ್ಮೀರಿಗರ ಕೈವಾಡವೂ ಇದರ ಹಿಂದೆ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಅದೀಗ ನಿಜವಾಗತೊಡಗಿದ್ದು, ಈ ಕುರಿತು ಎನ್‌ಐಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಘಟನೆಗೆ ಬಲವಾದ ಸಾಕ್ಷ್ಯವಾಯ್ತು ವಿಡಿಯೋ..
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಕಳೆದ ಏಪ್ರಿಲ್ 22ರಂದು ನಡೆದಿದ್ದ ಪ್ರವಾಸಿಗರ ಮಾರಣಹೋಮದ ವೇಳೆ ಜಿಪ್ ಲೈನ್ ಮೇಲೆ ಹೊರಡುವಾಗ ಪ್ರವಾಸಿಗರೊಬ್ಬರು ಮಾಡಿರುವ ಸೆಲ್ಫಿ ವಿಡಿಯೋವೊಂದು ಘಟನೆಗೆ ಬಲವಾದ ಸಾಕ್ಷ್ಯವಾಗಿದೆ. ಅದರಲ್ಲಿ ಆ ಪ್ರವಾಸಿಗ ಜಿಪ್‌ಲೈನ್ ಮೇಲೆ ಹೊರಡುವ ವೇಳೆ, ಜಿಪ್‌ಲೈನ್ ಆಪರೇಟರ್ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ರಿಪಿ ಭಟ್ ಎನ್ನುವ ಪ್ರವಾಸಿಗನ್ನು ಬೀಳ್ಕೊಡುತ್ತಾನೆ. ಆದರೆ ಇದೇ ವೇಳೆ ಜಿಪ್ ಲೈನ್ ಮೇಲೆಯೇ ರಿಷಿ ಭಟ್ ಮಾಡಿರುವ ವಿಡಿಯೋದಲ್ಲಿ ಉಗ್ರರು ಪ್ರವಾಸಿಗರ ಮೇಲೆ ಮಾಡಿರುವ ಭೀಕರ ಗುಂಡಿನ ದಾಳಿಯ ದೃಶ್ಯ ಸೆರೆಯಾಗಿದೆ. ಅಲ್ಲದೆ ಆ ರಕ್ತ ಪಿಪಾಸುಗಳ ಕೈಯಿಂದ ತಪ್ಪಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಾಡುವ ಮನಕಲಕುವ ದೃಶ್ಯ ಅದರಲ್ಲಿ ರೆಕಾರ್ಡ್ ಆಗಿದೆ.
ಅವನ ಮೇಲೆಯೇ ನನ್ನ ಅನುಮಾನ..!
ಇನ್ನೂ ಗಮನಾರ್ಹ ಅಂಶವೆಂದರೆ ಈ ಜಿಪ್‌ಲೈನ್ ಆಪರೇಟರ್, ಅಲ್ಲಾಹು ಅಕ್ಬರ್ ಅಂತ ಹೇಳಿದ ಕೂಡಲೇ ಗುಂಡಿನ ಶಬ್ದ ಕೇಳತೊಡಗಿತ್ತು. ನನಗಿಂತ ಮೊದಲೇ ನನ್ನ ಪತ್ನಿ ಮತ್ತು ಮಗ ಜಿಪ್‌ಲೈನ್‌ನಲ್ಲಿ ಹೋಗಿದ್ದರು. ಆಗ ಜಿಪ್‌ಲೈನ್ ಆಪರೇಟರ್ ‘ಅಲ್ಲಾಹು ಅಕ್ಬರ್’ ಎಂದಿರಲಿಲ್ಲ. ಆದರೆ, ನಾನು ಜಿಪ್‌ಲೈನ್‌ನಲ್ಲಿ ಹೋಗುವಾಗ ಹಾಗೆ ಹೇಳಿದ್ದ. ಅಲ್ಲಾಹು ಅಕ್ಬರ್ ಎಂದು ಕೂಗಿದ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಶಬ್ದ ಕೇಳಿಬಂತು ಎಂದು ಸೆಲ್ಫಿ ವೀಡಿಯೋ ಮಾಡಿಕೊಂಡಿದ್ದ ರಿಷಿ ಭಟ್ ಘಟನೆಯ ಬಗ್ಗೆ ವಿವರಿಸಿದ್ದಾರೆ. ನನಗೂ ಮುನ್ನ 9 ಮಂದಿ ಸವಾರಿಗೆ ಹೋಗಿದ್ದರು. ಆ ವೇಳೆ ಆಪರೇಟರ್ ಒಂದು ಪದವನ್ನೂ ಮಾತನಾಡಿರಲಿಲ್ಲ. ನನ್ನ ಸವಾರಿ ಆರಂಭವಾಗುತ್ತಿದ್ದಂತೆಯೇ ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದ. ನಂತರ ಗುಂಡಿನ ದಾಳಿ ಶುರುವಾಗಿತ್ತು. ನನಗೆ ಆತನ ಮೇಲೆ ಅನುಮಾನವಿದೆ. ಆಪರೇಟರ್ ಕಾಶ್ಮೀರಿ ವ್ಯಕ್ತಿಯಂತೇಯೇ ಕಾಣಿಸುತ್ತಿದ್ದ. ನನ್ನ ಸವಾರಿ ಆರಂಭವಾದ 20 ಸೆಕೆಂಡ್ ಬಳಿಕ ಉಗ್ರರ ದಾಳಿ ಬಗ್ಗೆ ಅರಿವಾಗಿತ್ತು. ಕೆಳಗಿದ್ದ ಜನರನ್ನು ಹತ್ಯೆ ಮಾಡಲಾಗುತ್ತಿತ್ತು. 5-6 ಮಂದಿಗೆ ಗುಂಡು ಹಾರಿಸಿದ್ದನ್ನು ನಾನು ನೋಡಿದೆ ಎಂದು ಅವರು ಹೇಳಿದ್ದಾರೆ.
ಜಿಪ್‌ಲೈನ್ ಕುಟುಂಬ ರಕ್ಷಿಸಿದೆ..
ಅಲ್ಲದೆ ನಾನು ಸೆಲ್ಫಿ ವೀಡಿಯೋ ಮಾಡಿಕೊಳ್ಳುವಾಗ ವ್ಯಕ್ತಿಯೊಬ್ಬ ಕೆಳಗೆ ಬೀಳುತ್ತಿರುವುದು ಕಾಣಿಸಿತು. ಏನೋ ಸಮಸ್ಯೆ ಆಗಿದೆ ಎಂದು ನಾನು ಆಗ ತಿಳಿದುಕೊಂಡೇ. ತಕ್ಷಣವೇ ಜಿಪ್‌ಲೈನ್ ಹಗ್ಗವನ್ನು ನಿಲ್ಲಿಸಿ ಸುಮಾರು 15 ಅಡಿ ಎತ್ತರದಿಂದ ಕೆಳಗೆ ಹಾರಿ, ನನ್ನ ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಓಡಿದೆ. ಆ ಕ್ಷಣದಲ್ಲಿ ನನ್ನ ಮತ್ತು ಕುಟುಂಬದವರ ಜೀವ ಉಳಿಸಿಕೊಳ್ಳುವ ಏಕೈಕ ಆಲೋಚನೆಯಲ್ಲಿದ್ದೆ. ಹೀಗಾಗಿ ಮುಖ್ಯದ್ವಾರ ಬಳಿ ಬಂದಾಗ ಸ್ಥಳೀಯರೊಬ್ಬರು ನೆರವು ನೀಡಿದ್ದಾರೆ. ನೆರವಿನಿಂದ ಆದಷ್ಟು ಬೇಗ ದಾಳಿ ನಡೆಯುವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಭಾರತೀಯ ಸೇನೆ ನೆರವಿಗೆ ಧಾವಿಸಿದೆ. ಗುಂಡಿನ ದಾಳಿ ನಡೆದ 25 ನಿಮಿಷದಲ್ಲಿ ಭಾರತೀಯ ಸೇನೆ ಆಗಮಿಸಿ ಹಲವರನ್ನು ರಕ್ಷಿಸಿದೆ ಎಂದು ಉಗ್ರರ ದಾಳಿಯಿಂದ ಪಾರಾಗಿ ಬಂದ ರಿಷಿ ಭಟ್ ತಾವು ಕಂಡ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಪಹಲ್ಗಾಮ್ ದಾಳಿಯ ತನಿಖೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸುತ್ತಿರುವ ಎನ್‌ಐಗೆ ಈ ವಿಡಿಯೋ ಹಾಗೂ ಆ ಜಿಪ್‌ಲೈನ್ ಆಪರೇಟರ್ ಪ್ರಬಲವಾದ ಸಾಕ್ಷ್ಯಗಳಾಗಿವೆ. ಹೀಗಾಗಿ ಈಗಾಗಲೇ ಜಿಪ್‌ಲೈನ್ ಆಪರೇಟರ್ ಅನ್ನು ವಶಕ್ಕೆ ಪಡೆದು ಎನ್ಐಯ ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಲಿದೆ. ಘಟನೆಗೂ ತನಗೂ ಏನು ಸಂಬಂಧ..? ಇದರ ಹಿಂದೆ ಯಾರಿದ್ದಾರೆ..? ಆತ ಸ್ಥಳೀಯ ಕಾಶ್ಮೀರಿಗನಾ..? ಎಂಬೆಲ್ಲ ಮಾಹಿತಿ ಪಡೆಯಲಿದೆ.
ಅಲ್ಲದೆ ಅಲ್ಲಾಹು ಅಕ್ಬರ್ ಅನ್ನೋದು ಆ ವೇಳೆ ಆ ಉಗ್ರರ ದಾಳಿಗೆ ಸಿಗ್ನಲ್ ಆಗಿತ್ತಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ. ಇನ್ನೂ ಘಟನಾ ಸ್ಥಳದಲ್ಲಿದ್ದ, ಅಂಗಡಿಕಾರರು, ಸ್ಥಳೀಯರು ಸೇರಿದಂತೆ ಎಲ್ಲರನ್ನೂ ತನಿಖಾ ಸಂಸ್ಥೆಯು ವಿಚಾರಣೆಗೆ ಮುಂದಾಗಿದೆ. ರಿಷಿ ಭಟ್ ಅವರು ತಾವು ಮಾಡಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಬಳಿಕ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ, ಇದನ್ನು ಗಮನಿಸಿದ ತನಿಖಾ ಸಂಸ್ಥೆಯ ಇನ್ನಷ್ಟು ಅಲರ್ಟ್ ಆಗಿ ಶಂಕಿತರಿಗಾಗಿ ಬಲೆ ಬೀಸಿದೆ.