ಬೆಂಗಳೂರು: ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯದ ಘಟಕಗಳ ನೂತನ ಪದಾಧಿಕಾರಿಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಕಾನೂನು ಘಟಕದ ಅಧ್ಯಕ್ಷರಾಗಿ ಕೆ.ದಿವಾಕರ, ಮಹಿಳಾ ಘಟಕದ ಅಧ್ಯಕ್ಷರಾಗಿ ಕುಶಾಲ ಸ್ವಾಮಿ, ಎಸ್ಸಿ ಮತ್ತು ಎಸ್ಟಿ ಘಟಕದ ಅಧ್ಯಕ್ಷರಾಗಿ ಪುರುಷೋತ್ತಮ, ಕಲಾ ಹಾಗೂ ಸಂಸ್ಕೃತಿ ಘಟಕದ ಅಧ್ಯಕ್ಷರಾಗಿ ಸುಷ್ಮಾ ವೀರ, ಯುವ ಘಟಕ ಸಂಚಾಲಕರಾಗಿ ಮುಕುಂದ್ ಗೌಡ, ನೀತಿ ಮತ್ತು ಸಂಶೋಧನಾ ಘಟಕದ ಅಧ್ಯಕ್ಷರಾಗಿ ಡಾ.ವಿಶ್ವನಾಥ ಬಿ.ಎಲ್. ಹಾಗೂ ಉದ್ಯಮಿಗಳ ಘಟಕದ ಅಧ್ಯಕ್ಷರಾಗಿ ಸಂಚಿತ್ ಗೌರವ್ ಅವರನ್ನು ನೇಮಕ ಮಾಡಲಾಗಿದೆ.
ಚುನಾವಣಾ ಆಯೋಗದ ಸಂಪೂರ್ಣ ನಿಯಂತ್ರಣಕ್ಕೆ ಕೇಂದ್ರ ಸಂಚು: ಮು.ಚಂದ್ರು
ಬೆಂಗಳೂರು: 2024ರ ಲೋಕಸಭೆ ಚುನಾವಣೆಗೂ ಮುನ್ನ ಹಾಲಿ ಮುಖ್ಯ ಚುನಾವಣಾ ಆಯುಕ್ತರು ನಿವೃತ್ತರಾಗುತ್ತಿದ್ದಾರೆ. ಅದಕ್ಕೂ ಮೊದಲೇ ತನಗೆ ಬೇಕಾದ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವಂತಹ ಸಂದರ್ಭವನ್ನು ಸೃಷ್ಟಿ ಮಾಡಿಕೊಳ್ಳುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಮೊದಲು ಆಯ್ಕೆ ಸಮಿತಿಯಲ್ಲಿ ಮುಖ್ಯನ್ಯಾಯಮೂರ್ತಿ, ಪ್ರಧಾನಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಇರುತ್ತಿದ್ದರು. ಈ ಕಾಯ್ದೆಯನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಹೊರಡಿಸಿದೆ. ಇದರ ಪ್ರಕಾರ ಮುಖ್ಯ ಚುನವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಗೆ ಪ್ರಧಾನಮಂತ್ರಿ ಮುಖ್ಯಸ್ಥರಾಗಿರುತ್ತಾರೆ. ಓರ್ವ ಸಂಪುಟದ ಸಚಿವ ಹಾಗೂ ವಿರೋಧ ಪಕ್ಷದ ಓರ್ವ ಸದಸ್ಯ ಇರುತ್ತಾರೆ. ಈ ಮೂಲಕ ಸುಲಭವಾಗಿ ತನಗೆ ಬೇಕಾದ ವ್ಯಕ್ತಿಯನ್ನೇ ಪ್ರಮುಖ ಸ್ಥಾನಕ್ಕೆ ಕೂರಿಸುವ ಮೂಲಕ ಚುನಾವಣೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ದೆಹಲಿ ಸುಗ್ರಿವಾಜ್ಞೆಗೆ ತೀವ್ರ ಆಕ್ಷೇಪ:
ಕೇಂದ್ರ ಸರ್ಕಾರವು ಸರ್ವಾಧಿಕಾರ ನಡೆಸುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಹಿಡಿತಕ್ಕೆ ತೆಗೆದುಕೊಂಡು ತನ್ನ ವಿರೋಧಿ ಪಕ್ಷದ ಸರ್ಕಾರಗಳನ್ನು ಕಟ್ಟಿಹಾಕುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ದೆಹಲಿ ಸುಗ್ರಿವಾಜ್ಞೆಯನ್ನು ತಂದಿದೆ. ದೆಹಲಿಯನ್ನು ಸಂಪೂರ್ಣವಾಗಿ ಗವರ್ನರ್ ಕೈಗಿಡುವ ಮೂಲಕ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ. ತಮಿಳುನಾಡಿನಲ್ಲಿ ಮಂತ್ರಿಗಳನ್ನೇ ರಾಜ್ಯಪಾಲರು ವಜಾ ಮಾಡಿದ್ದಾರೆ. ರಾಜ್ಯಪಾಲರಿಗೆ ಮಂತ್ರಿಗಳನ್ನು ವಜಾಗೊಳಿಸುವ ಹಕ್ಕು ಇಲ್ಲ. ರಾಜಕೀಯ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಜಕಾರಣ ಬದಿಗೊತ್ತಿ ಗಾಯಗೊಂಡವರ ಜೀವ ಉಳಿಸಿ:
ಇದೇ ವೇಳೆ ಶುಕ್ರವಾರ ನಗರದ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮುಖ್ಯಮಂತ್ರಿ ಚಂದ್ರು ವಿಷಾಧ ವ್ಯಕ್ತಪಡಿಸಿದರು. ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ಜರುಗಿದ್ದರೂ ಮುನ್ನೆಚ್ಚರಿಕೆ ವಹಿಸದಿರುವುದು ಸರ್ಕಾರದ ಬೇಜವಾಬ್ದಾರಿತನವಾಗಿದೆ ಎಂದರು.
ರಾಜಕಾರಣವನ್ನು ಬದಿಗೊತ್ತಿ ಜೀವನ್ಮರಣದ ಮಧ್ಯೆ ಚಿಕಿತ್ಸೆ ಪಡೆಯುತ್ತಿರುವ 9 ಮಂದಿ ಸಿಬ್ಬಂದಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು. ಚಿಕಿತ್ಸೆಯ ಸಂಪೂರ್ಣ ವೆಚ್ಛವನ್ನು ಭರಿಸಬೇಕು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಅಗ್ನಿ ಅನಾಹುತದ ಕುರಿತು ಆಕಸ್ಮಿಕವಲ್ಲ, ಅನುಮಾನಸ್ಪದ ಕೃತ್ಯವಾಗಿದೆ ಎಂದು ಪುನರುಚ್ಛರಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪವಿದೆ, ಗುತ್ತಿಗೆದಾರರ ಬಾಕಿ ಪಾವತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ 15% ಆರೋಪ ಕೇಳಿಬಂದಿದೆ. ಹಾಗಾಗಿ ಎರಡು ಪಕ್ಷಗಳ ಮೇಲೆ ಅನುಮಾನವಿದೆ. ಭ್ರಷ್ಟ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶ ಮಾಡುವ ದುರುದ್ದೇಶದಿಂದ ಅಗ್ನಿ ಅನಾಹುತವನ್ನು ಬೇಕೆಂದೇ ಯಾರೋ ಮಾಡಿಸಿರುವ ಸಾಧ್ಯತೆ ಇದೆ. ತಾವು ಶುದ್ಧಹಸ್ತರು ಎಂದಾದರೆ ಸಮಗ್ರ ತನಿಖೆ ನಡೆಸಿ ಅಗ್ನಿ ಅನಾಹುತಕ್ಕೆ ನಿಜವಾದ ಕಾರಣವನ್ನು ಬಯಲಿಗೆಳೆಯಬೇಕು ಎಂದು ಚಂದ್ರು ಅವರು ಉಭಯ ಪಕ್ಷಗಳಿಗೆ ಸವಾಲು ಹಾಕಿದರು.