ದಾವಣಗೆರೆ: ಬಿಜೆಪಿ ತಾನು ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಹಕ್ಕುಗಳನ್ನು ಹತ್ತಿಕ್ಕುವ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ, ರಾ, ಸೇರಿದಂತೆ ಹಲವು ಸಂಸ್ಥೆಗಳನ್ನು ಬಳಸಿಕೊಂಡು ಭಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸರಿಯಾದ ಚಿಂತನೆ ಮಾಡದೆ ಉಚಿತ ಭಾಗ್ಯಗಳ ಯೋಜನೆಗಳನ್ನು ಜಾರಿ ಮಾಡಿದೆ. ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ಸಾಲ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂದು ಹೇಳಿದರು.
ನೂರು ದಿನಗಳಲ್ಲಿ ಹೇಳಿದ್ದನ್ನು ಮಾಡಿದ್ದೇವೆ ಎಂದು ಪ್ರಚಾರ ಮಾಡಿದ್ದಾರೆ, ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮೂರು ತಿಂಗಳಿನಿಂದ ಹಣ ಕೊಟ್ಟಿಲ್ಲ ಎಂದು ಆರೋಪಿಸಿದರು.
ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ
ಈ ವರ್ಷಪೂರ್ತಿ ಬಹುತೇಕ ಚುನಾವಣೆ ವರ್ಷವಾಗಿರುವ ಕಾರಣ, ತಾಲೂಕ್ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳನ್ನು ನಡೆಸಬೇಕಾಗಿದೆ. ಜನರ ಬಳಿ ನೇರವಾಗಿ ಸಂಪರ್ಕ ಸಾಧಿಸುವ ಮೂಲಕ ಸಂಘಟನೆ ಗಟ್ಟಿಗೊಳಿಸಲು ಪ್ರವಾಸ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಮ್ಮದು ಸಾಮಾನ್ಯ ಜನರ ಪಕ್ಷವಾಗಿದ್ದು 10-15 ಹಳ್ಳಿಗಳ ಜನರನ್ನು ಒಂದು ಕಡೆ ಸೇರಿಸಿ, ‘ಬನ್ನಿ ಮಾತಾಡೋಣ, ಎಲ್ಲಾ ಸೇರೋಣ’ ಎನ್ನುವ ಘೋಷವಾಕ್ಯ ಇಟ್ಟುಕೊಂಡು, ಜನಗಳ ಜೊತೆಯಲ್ಲಿ ಚರ್ಚೆ ಮಾಡಿ, ನಮ್ಮ ಪಕ್ಷ ದೆಹಲಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಸ್ವಂತ ಬಲದಿಂದ ಚುನಾವಣೆಯಲ್ಲಿ ಸ್ಪರ್ಧೆ
ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕ್ ಪಂಚಾಯಿತಿ ಅಥವಾ ಬಿಬಿಎಂಪಿ ಯಾವುದೇ ಚುನಾವಣೆ ಬಂದರೂ ಆಮ್ ಆದ್ಮಿ ಪಕ್ಷ ಸ್ವಂತ ಬಲದಿಂದ ಸ್ಪರ್ಧೆ ಮಾಡುವುದು ಎಂದು ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು. ಪಕ್ಷ ಸಂಘಟನೆ ಜೊತೆಯಲ್ಲೇ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಕೂಡ ಮಾಡಲಾಗುವುದು ಎಂದು ಹೇಳಿದರು. ಕೆಲವು ಕಡೆ ಮೀಸಲಾತಿ ಇರುವುದರಿಂದ ಅದನ್ನೆಲ್ಲಾ ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಪಕ್ಷ ಸಂಘಟನೆಯ ಕಾರ್ಯವನ್ನು ಆರಂಭಿಸಿದ್ದು, ತುಮಕೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಮುಗಿಸಿಕೊಂಡು ದಾವಣಗೆರೆಗೆ ಬಂದಿರುವುದಾಗಿ ಹೇಳಿದರು.
Kannada; ಕರ್ನಾಟಕದಲ್ಲಿ ಮಕ್ಕಳಿಗೆ ಮಾತೃಭಾಷೆ ಕನ್ನಡ ಕಡ್ಡಾಯ: ಸಚಿವ ಮಧು ಬಂಗಾರಪ್ಪ
DKS: ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆ ಅಗತ್ಯವಿಲ್ಲ:ಡಿಕೆಶಿ