ರಾಜ್ಯದ ಹಲವೆಡೆ ಅಸಂಘಟಿತ ಕಾರ್ಮಿಕರುಗಳು ಕಳೆದ ಮಾರ್ಚ್ ತಿಂಗಳ ಪೂರ್ಣ ಸಂಬಳವನ್ನು ಪಡೆದುಕೊಳ್ಳದೆ ಶೋಷಿತರಾಗುತ್ತಿದ್ದಾರೆ.ಸಣ್ಣ ಪುಟ್ಟ ಕಾರ್ಖಾನೆಗಳು , ಗಾರ್ಮೆಂಟ್ಸ್ ಫ್ಯಾಕ್ಟರಿಗಳು,5ಕ್ಕೂ ಕಡಿಮೆ ಕೆಲಸಗಾರರನ್ನು ಹೊಂದಿರುವ ಅನೇಕ ಅಂಗಡಿಗಳು, ಶೋರೂಂಗಳು,ಹೋಟೆಲ್‌ಗಳು ಹಾಗೂ ಇನ್ನಿತರ ವ್ಯಾಪಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಗಳಿಗೆ ಲಾಕ್ ಡೌನ್ ನೆಪದಲ್ಲಿ ಮಾರ್ಚ್ ತಿಂಗಳ ಸಂಬಳದಲ್ಲಿ ಅರ್ಧಂಬರ್ಧ ಕಡಿತ ಮಾಡಿರುವ ಲಕ್ಷಾಂತರ ಉದಾಹರಣೆಗಳು ಇದೀಗ ಕೇಳಿಬರುತ್ತಿವೆ.
ಮುಂದಿನ ಏಪ್ರಿಲ್ ತಿಂಗಳ ಸಂಬಳವನ್ನು ನೀಡಲಾಗುವುದಿಲ್ಲ.ಕೇವಲ ಊಟ ವಸತಿಗೆ ಆಗುವಷ್ಟು ಮಾತ್ರ ಹಣವನ್ನು ನೀಡಲಾಗುವುದೆಂದು ಮಾಲೀಕರುಗಳು ಕಾರ್ಮಿಕರಿಗೆ ಈಗಾಗಲೇ ತಿಳಿಸಿದ್ದಾರೆ.ಇಂತಹ ಕಾರ್ಮಿಕರುಗಳು ತಮ್ಮ ಅಳಲನ್ನು ಯಾರಲ್ಲಿಯೂ ತೋಡಿ ಕೊಳ್ಳಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರಿನಂತಹ ಬೃಹತ್ ವಾಣಿಜ್ಯ ನಗರಿಯಲ್ಲಿ ಇಂದು ಲಕ್ಷಾಂತರ ಸಂಖ್ಯೆಯ ಕಾರ್ಮಿಕರುಗಳು ಕರ್ನಾಟಕದ ಹಾಗೂ ಭಾರತದ ಮೂಲೆ ಮೂಲೆಗಳಿಂದ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವುಗಳಲ್ಲಿ ಬಹುಪಾಲು ಮಂದಿಗೆ ಭಾಷೆಯ ಸಮಸ್ಯೆಯೂ ಸಹ ಇದೆ .
ಮುಖ್ಯಮಂತ್ರಿಗಳು ಲಾಕ್ ಡೌನ್ ಆರಂಭದ ಮೊದಲು ಯಾವುದೇ ಕಾರ್ಮಿಕರಿಗೆ ವೇತನದಲ್ಲಿ ಕಡಿತ ಮಾಡಬಾರದೆಂದು ಹಾಗೂ ಯಾರನ್ನೂ ಸಹ ಕೆಲಸದಿಂದ ತೆಗೆದು ಹಾಕಬಾರದೆಂಬ ಕಠಿಣ ಆದೇಶವನ್ನು ನೀಡಿದ್ದರೂ ಸಹ ಮುಖ್ಯಮಂತ್ರಿಗಳ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲದಾಗಿದೆ.
ಲಾಕ್ ಡೌನ್ ನಂತಹ ಈ ಮಹಾ ಭೀತಿಯ ಸಂದರ್ಭದಲ್ಲಿ ಕಾರ್ಮಿಕರುಗಳ ಹಿತಕ್ಕಾಗಿ ಈ ಮಹತ್ವದ ಆದೇಶವನ್ನು ಮಾಡಲಾಗಿದೆ.ಕಾರ್ಮಿಕರ ಮೇಲಿನ ಶೋಷಣೆಯನ್ನು ತಡೆಯಲು ಮಾಡಿರುವ ಈ ಆದೇಶವನ್ನು ಪಾಲಿಸದ ಮಾಲೀಕರುಗಳ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ಜರುಗಿಸುವುದರ ಮೂಲಕ ಕಟ್ಟುನಿಟ್ಟಾಗಿ ಈ ಆದೇಶವನ್ನು ಕಾರ್ಮಿಕ ಇಲಾಖೆಯು ಪಾಲಿಸ ಬಹುದಿತ್ತು.
ಆದರೆ ಕಾರ್ಮಿಕ ಇಲಾಖೆಯ ಮಂತ್ರಿಗಳಿಂದ ಹಿಡಿದು ಅಧಿಕಾರಿಗಳ ತನಕ ಯಾರೂ ಸಹ ಇತ್ತ ಕಡೆ ಗಮನ ಹರಿಸಿಲ್ಲ.ರಾಜ್ಯದಲ್ಲಿ ಲಕ್ಷಾಂತರ ಇಂತಹ ದೂರುಗಳಿದ್ದರೂ ಸಹ ದೂರುಗಳನ್ನು ಕೇಳುವ ಗೋಜಿಗೆ ಕಾರ್ಮಿಕ ಇಲಾಖೆ ಹೋಗಿಲ್ಲದಿರುವುದು ಅತ್ಯಂತ ದುರದೃಷ್ಟಕರ
ಸಂಗತಿ.ಇದುವರೆವಿಗೂ ಈ ಆದೇಶವನ್ನು ಉಲ್ಲಂಘಿಸಿದ ಮಾಲೀಕರ ವಿರುದ್ಧ ಒಂದೇ ಒಂದು ಪ್ರಕರಣವನ್ನು ದಾಖಲಿಸಿ ಕ್ರಮವನ್ನು ಕೈಗೊಂಡಿಲ್ಲ. ಕಾಮಾಕ್ಷಿ ಪಾಳ್ಯ ಬೊಮ್ಮನಹಳ್ಳಿ ಮುಂತಾದ ಕಡೆ ಗಾರ್ಮೆಂಟ್ಸ್ ಮಾಲೀಕರು ಈ ಲಾಕ್ ಡೌನ್ ಸಮಯದಲ್ಲಿಯೂ ಸಹ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿರುವುದು ಕಂಡು ಬರುತ್ತಿದೆ.ಇಂತಹ ಕಾರ್ಖಾನೆಗಳನ್ನು ಮುಚ್ಚಿಸುವ ಯಾವುದೇ ಕ್ರಮಗಳು ಇದುವರೆಗೂ ಜರುಗಿಲ್ಲ.
ಇಂತಹ ಮಾಲೀಕರೊಂದಿಗೆ ತಮ್ಮ ಸ್ವ ಹಿತಾಸಕ್ತಿಗಾಗಿ ಕೈಜೋಡಿಸಿ ಕಾರ್ಮಿಕರ ಹಿತ ಹಿತವನ್ನು ಬಲಿ ಕೊಡುತ್ತಿರುವ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಇದ್ದೂ ಸಹ ಸತ್ತಂತಾಗಿದೆ.ಈ ಇಲಾಖೆಯ ಮಂತ್ರಿಗೆ ಇಲಾಖೆಯ ಗಂಧ ಗಾಳಿಯೂ ಸಹ ಗೊತ್ತಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಮುಖ್ಯಮಂತ್ರಿಗಳು ಈ ಕೂಡಲೇ ಇತ್ತ ಕಡೆ ಗಮನ ಹರಿಸಿ ಮಹತ್ವದ ಈ ಇಲಾಖೆಯ ಜವಾಬ್ದಾರಿಯನ್ನು ಬೇರೊಬ್ಬ ಕ್ರಿಯಾಶೀಲ ವ್ಯಕ್ತಿಗಳಿಗೆ ನೀಡಬೇಕಿದೆ .ಈ ಮೂಲಕ ರಾಜ್ಯದ ಲಕ್ಷಾಂತರ ಕಾರ್ಮಿಕರುಗಳ ಕೋರೋನ ಸಂಕಷ್ಟದ ಅವಧಿಯ ವರೆವಿಗೂ ವೇತನವನ್ನು ಪಡೆದುಕೊಳ್ಳಲು ಅತ್ಯಂತ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.