ಕರ್ನಾಟಕ ಟಿವಿ : ಜನಸಾಮಾನ್ಯರು ಬಳಸುವಂತಹ ದಿನ ಬಳಕೆ ವಸ್ತುಗಳ ಮೇಲೆ ಸೆಸ್ ಹೆಚ್ಚಳ ಮಾಡಿ ಈಗಾಗಲೇ ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ಜನರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸದ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ದೇಶ ಮಾರುವ ಹಾಗೂ ಜನಸಾಮಾನ್ಯರ ಬಾಯಿಗೆ ಮಣ್ಣು ಹಾಕುವ ಬಜೆಟ್ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಸ್ವರ್ಗ ಮಾಡಲಾಗುವುದು ಎಂದು ಹೇಳಿದ್ದ ಬಿಜೆಪಿ ಸರ್ಕಾರ ಹೆದ್ದಾರಿ ಅಭಿವೃದ್ಧಿಗೆಂದು ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ಇತರೇ ರಾಜ್ಯಗಳಿಗೆ ಹಣ ನೀಡಿದ್ದು ಕರ್ನಾಟಕಕ್ಕೆ ಶೂನ್ಯ, ಉದ್ಯೋಗ ಸೃಷ್ಟಿಗೆ ನಯಾಪೈಸೆ ನೀಡಿಲ್ಲ ಎಂದು ಆರೋಪಿಸಿದ್ರು.
ಕೃಷಿ ಸೆಸ್ ಹೆಸರಿನಲ್ಲಿ ಕೃಷಿಕರಿಗೆ ಅನುಕೂಲ ಮಾಡಲಾಗುವುದು ಎಂದು ಹೇಳಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವುದು ಎಷ್ಟು ಸರಿ, ಡೀಸೆಲ್ ಮೇಲಿನ ಸೆಸ್ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವೇ ಎಂದು ವ್ಯಂಗ್ಯವಾಡಿದರು.
ಕಳೆದ ವರ್ಷದ ವಿತ್ತೀಯ ಕೊರತೆ ಶೇ 3ರಷ್ಟಿದ್ದು, ಪ್ರಸ್ತುತ 9.5% ಆಗಿದೆ. ಮುಂದಿನ ವರ್ಷಕ್ಕೆ ಅದನ್ನು 6.8% ಆಗಬಹುದು, ಈ ಕೊರತೆ ತುಂಬಲು 12 ಲಕ್ಷ ಕೋಟಿ ಸಾಲ ಮಾಡಲು ಹೊರಟಿರುವ ಸರ್ಕಾರ ದೇಶವನ್ನು, ಈ ದೇಶದ ಜನರನ್ನು ಕೂಡ ಮುಂದಿನ ದಿನಗಳಲ್ಲಿ ಸಾಲದ ಸುಳಿಗೆ ಸಿಲುಕಿಸಿ ಹುಟ್ಟಿದ ಮಗುವನ್ನು ಮಾರಾಟ ಮಾಡಲು ಹೇಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಪ್ರಸ್ತುತ ಬಜೆಟ್‌ನಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಮೂಲಕ ಜನ ಅಗತ್ಯತೆಯ ಮೂಲಕ್ಕೆ ಕೈ ಹಾಕಲಾಗಿದೆ.
ಅತಿ ದೊಡ್ಡ ಕ್ಷೇತ್ರವಾದ ವಿಮೆಯಲ್ಲಿ 74% ತನಕ ವಿದೇಶೀ ಹೂಡಿಕೆಗೆ ಅವಕಾಶ, ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳು ಮತ್ತು ಒಂದು ಜನರಲ್ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ
ಹಳೆಯ ವಾಹನಗಳನ್ನು ಗುಜುರಿಗೆ ಹಾಕಬೇಕು ಎಂದು ಹೇಳುತ್ತಿರುವ ಸರ್ಕಾರ ಮೊದಲು ತನ್ನ ಈ ಬಜೆಟ್‌ಅನ್ನು ಗುಜುರಿಗೆ ಎಸೆಯಲಿ ಎಂದು ಕೇಂದ್ರ ಸರ್ಕಾರದ ಬಜೆಟ್ ಅನ್ನು ಎಳೆಎಳೆಯಾಗಿ ಟೀಕಿಸಿದ್ರು.
ಕರ್ನಾಟಕ ಟಿವಿ, ಬೆಂಗಳೂರು

