ಕಾಂಗ್ರೆಸ್ ಸಾಧನೆಗೆ ABVP ವ್ಯಂಗ್ಯ!

ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶದ ಹಿನ್ನೆಲೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ — ಎಬಿವಿಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯಾತ್ಮಕ ಪೋಸ್ಟರ್ ಅಭಿಯಾನ ನಡೆಸಲಾಗಿದೆ. ತುಮಕೂರು ನಗರದ ಬಿ.ಎಚ್ ರಸ್ತೆಯ ವಿವಿಧ ಕಂಬಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ವಿದ್ಯಾರ್ಥಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಶಿಕ್ಷಣ ನೀತಿ, ವಿದ್ಯಾರ್ಥಿ ವೇತನ, ವಸತಿ ನಿಲಯ ಸಮಸ್ಯೆಗಳು ಹಾಗೂ ನಿರುದ್ಯೋಗ ವಿಚಾರಗಳನ್ನು ಉಲ್ಲೇಖಿಸಿ ಎಬಿವಿಪಿ ಲೇವಡಿ ಮಾಡಿದೆ. “ಸಾಧನೆ” ಎಂಬ ಪದವನ್ನು ವ್ಯಂಗ್ಯವಾಗಿ ಬಳಸಿಕೊಂಡು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ರೀತಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಪೋಸ್ಟರ್‌ಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. “ರಾಜ್ಯದಲ್ಲಿ ಶಾಂತವಾಗಿದ್ದ ಶಾಲಾ-ಕಾಲೇಜು ಕ್ಯಾಂಪಸ್‌ಗಳನ್ನು ಮತ ಮತ್ತು ಧರ್ಮದ ಗುಪ್ತ ಅಜೆಂಡಾದ ಅಡಿಯಲ್ಲಿ ಕೋಮು ಚಿಂತನೆಗೆ ತಳ್ಳಿರುವುದಕ್ಕಾಗಿ ಅಭಿನಂದನೆಗಳು” ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ, “ಸ್ವಪ್ರತಿಷ್ಠೆಯ ರಾಜಕಾರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ — ಎನ್‌ಇಪಿ ತೆಗೆದು ರಾಜ್ಯ ಶಿಕ್ಷಣ ನೀತಿ — ಎಸ್‌ಇಪಿ ಜಾರಿಗೆ ತಂದು ವಿದ್ಯಾರ್ಥಿ ಸಮುದಾಯದಲ್ಲಿ ಗೊಂದಲ ಸೃಷ್ಟಿಸಿ ಯುವಜನರ ಭವಿಷ್ಯಕ್ಕೆ ಧಕ್ಕೆಯುಂಟು ಮಾಡಿರುವುದಕ್ಕಾಗಿ ಅಭಿನಂದನೆಗಳು” ಎಂದು ಟೀಕಿಸಲಾಗಿದೆ. “ಅರ್ಹ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡದೆ ಶಾಲೆ ಮತ್ತು ಕಾಲೇಜು ತೊರೆಯುವ ಪರಿಸ್ಥಿತಿ ನಿರ್ಮಾಣ ಮಾಡಿರುವುದಕ್ಕಾಗಿ ಅಭಿನಂದನೆಗಳು” ಎಂಬ ಆರೋಪವೂ ಪೋಸ್ಟರ್‌ನಲ್ಲಿ ಇದೆ.

ಇದರ ಜೊತೆಗೆ, “ರಾಜ್ಯದಲ್ಲಿ ನಿರುದ್ಯೋಗ ಗ್ಯಾರಂಟಿಯನ್ನು ಮುಂದುವರೆಸುತ್ತಿರುವುದಕ್ಕಾಗಿ ಅಭಿನಂದನೆಗಳು” ಎಂದು ಸರ್ಕಾರದ ವಿರುದ್ಧ ಎಬಿವಿಪಿ ಕಿಡಿಕಾರಿದೆ.
ಒಟ್ಟಾರೆ, ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶದ ಮಧ್ಯೆಯೇ ಎಬಿವಿಪಿ ನಡೆಸಿದ ಈ ಪೋಸ್ಟರ್ ಅಭಿಯಾನ ತುಮಕೂರಿನಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗೆ ಹೊಸ ರೂಪ ನೀಡಿದೆ.

About The Author