ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಸದ್ಯ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ನಿನ್ನೆ ನಟ ದರ್ಶನ್ (Actor Darshan) ಸಿಗರೇಟ್ ಸೇದುತ್ತಿರುವ ಫೋಟೋ ಮತ್ತು ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವ ದೃಶ್ಯ ಸಖತ್ ವೈರಲ್ ಆಗಿತ್ತು.. ಇದರ ಬೆನ್ನಲ್ಲೇ ಇದೀಗ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು 12 ದಿನಗಳ ಹಿಂದೆ ಪರಪ್ಪನ ಅಗ್ರಹಾರ ಮುಖ್ಯ ಅಧೀಕ್ಷಕ ಶೇಷಮೂರ್ತಿ ಅವರಿಗೆ ಬರೆದಿದ್ದ ಆದೇಶದ ಪತ್ರವೊಂದು ವೈರಲ್ ಆಗುತ್ತಿದೆ.
2024ರ ಆಗಸ್ಟ್ 14ರಂದು ಹೊರಡಿಸಲಾಗಿದ್ದು ಎನ್ನಲಾದ ಆದೇಶ ಪತ್ರದಲ್ಲಿ ಕಾರಾಗೃಹದ ಭದ್ರತಾ ವಿಭಾಗ, ಬ್ಯಾರಕ್, ಸೆಲ್‌ಗಳಲ್ಲಿರುವ ರೌಡಿಶೀಟರ್ಗಳು, ಉಗ್ರವಾದಿಗಳು ಮತ್ತು ನಕ್ಸಲ್ ಬಂಧಿಗಳು ಸೇರಿದಂತೆ ಎಲ್ಲರ ಭದ್ರತೆಯನ್ನು ಪ್ರತಿನಿತ್ಯ ಖುದ್ದು ಪರಿಶೀಲಿಸಬೇಕು ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ಕೇಂದ್ರ ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು ಕೈದಿಗಳಿಗೆ ದೊರೆಯದಂತೆ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕಾರಾಗೃಹಗಳ ಉಪಮಹಾನಿರೀಕ್ಷಕರಿಗೆ ಪ್ರತಿನಿತ್ಯ ವರದಿ ಸಲ್ಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದಲ್ಲಿ ಕರ್ತವ್ಯಲೋಪ ಎಂದು ಪರಿಗಣಿಸಲಾಗುವುದು. ಅಲ್ಲದೆ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶ ಪತ್ರದಲ್ಲಿ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಸಿಗರೇಟು, ಮನೆ ಊಟ, ಫೇಮಸ್ ಮಿಲ್ಟ್ರಿ ಹೋಟೆಲ್ನಿಂದ ಚಿಕನ್ ಬಿರಿಯಾನಿ ಕೂಡ ಸಪ್ಲೈ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಊಟದ ಜೊತೆಗೆ ಬೇಕಾದಾಗ ಎಣ್ಣೆ ಸಪ್ಲೈ ಆಗುತ್ತಿದ್ದು, ನಟ ದರ್ಶನ್ ಇರುವ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ಪ್ರತಿನಿತ್ಯ ಆ ಪಾರ್ಟಿಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ದರ್ಶನ್ ಬ್ಯಾರಕ್‌ನಲ್ಲಿ ನಡೆಯುವ ಎಣ್ಣೆ ಪಾರ್ಟಿಯಲ್ಲಿ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು, ದರ್ಶನ್ ಆಪ್ತ ನಾಗರಾಜ್ ಮತ್ತು ಪವನ್ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.