ಜೈಲಿನಲ್ಲಿ ನಟ ದರ್ಶನ್ ಸಿಗರೇಟ್- ಕಾಫಿ ಪಾರ್ಟಿಯ ಫೋಟೋ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದರ್ಶನ್ ಸಿಗರೇಟ್ ಹಾಗೂ ಟೀ ಪಾರ್ಟಿಯ ಫೋಟೋ ತೆಗೆದಿದ್ದು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ.
ದರ್ಶನ್ ಕಾಫಿ ಕುಡಿಯತ್ತಾ ಸಿಗರೇಟ್ ಸೇದುತ್ತಿರೋ ಫೋಟೋ ತೆಗೆದಿರೋದು ರೌಡಿಶೀಟರ್ ವೇಲು ಎಂದು ಹೇಳಲಾಗಿದೆ. ವೇಲು ಫೋಟೋ ತೆಗೆದು ಚಾಮರಾಜನಗರದ ದರ್ಶನ್ ಅಭಿಮಾನಿಗಳಿಗೆ ಕಳುಹಿಸಿದ್ದ. ಅಭಿಮಾನಿಗಳು ಈ ಫೋಟೋವನ್ನು ವೈರಲ್ ಮಾಡಿದ್ದಾರೆ ಎನ್ನಲಾಗಿದೆ. ಯಾವಾಗ ದರ್ಶನ್ ರಾಜಾತಿಥ್ಯದ ಫೋಟೋ ವೈರಲ್ ಆಯ್ತೋ, ಎಎಜಿ ಆನಂದ್ ರೆಡ್ಡಿ ಅವರು ಜೈಲಿನಲ್ಲಿ ಖೈದಿಗಳು ಹಾಗೂ ಜೈಲಾಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ಈ ಕಾಫಿ ಪಾರ್ಟಿ ಯಾವಾಗ ನಡೆದಿದ್ದು, ಆ ವೇಳೆ ಯಾರು ಜೈಲಾಧಿಕಾರಿಗಳು ಇದ್ದರು? ಎಂಬ ಕುರಿತು ಮಾಹಿತಿ ಪಡೆಯಲಾಗಿದೆ.
ಇತ್ತೀಚಿಗೆ ನಟಿ ರವಿಚಾ ರಾಮ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ರು. ಅದೇ ದಿನ ಕಾಫಿ-ಸಿಗರೇಟ್ ಪಾರ್ಟಿ ನಡೆದಿದೆ ಎಂದು ಹೇಳಲಾಗ್ತಿದೆ. ಆನಂದ್ ರೆಡ್ಡಿ ಅವರು ವಿಚಾರಣೆ ನಡೆಸಿದ ವರದಿಯನ್ನು ಡಿಜಿಗೆ ಸಲ್ಲಿಕೆ ಮಾಡಿದ್ದಾರೆ.
ಜೈಲಿನೊಳಗೆ ದರ್ಶನ್ ಐಷಾರಾಮಿ ಜೀವನ ನಡೆಸಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೇ, ಜೈಲಿನ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಜೈಲರ್‌ಗಳಾದ ಪ್ರಭು ಖಂಡ್ರೆ, ಶರಣಬಸಪ್ಪ, ಶರಣಬಸವ ಅಮೀನಗಡ, ಅಸಿಸ್ಟೆಂಟ್ ಜೈಲರ್ ಎಲ್ಎಸ್ ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ಸ್ ಸಂಪತ್ ಕುಮಾರ್ ಕಡಪಟ್ಟಿ, ಬಸಪ್ಪ ಕೂಡ ಅಮಾನತಾಗಿದ್ದಾರೆ.