ನಟ ದರ್ಶನ್ ಕುರಿತು ಅವಹೇಳನಕಾರಿಯಾಗಿ ನಟ ಪ್ರಥಮ್ ಮಾತನಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ರೌಡಿಶೀಟರ್ ‘ಬೇಕರಿ’ ರಘು ಮತ್ತು ಯಶಸ್ವಿನಿ ಅನ್ನೋರು ಬೆದರಿಕೆ ಹಾಕಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಆದರೆ, ನ್ಯಾಯಾಲಯವು ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿದ್ದ ಕಾರಣ ಅವರನ್ನು ಮತ್ತೆ ಬಂಧಿಸಲಾಗಿದೆ.
ಕಳೆದ ತಿಂಗಳು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನಟ ಪ್ರಥಮ್, ರೌಡಿಶೀಟರ್ ರಘು ಅವರಿಂದ ನಮ್ಮ ಬಾಸ್ ಬಗ್ಗೆ ಅವಹೇಳನವಾಗಿ ಮಾತನಾಡಬೇಡ ಎಂದು ಬೆದರಿಕೆಗೆ ಒಳಗಾಗಿದ್ದರು. ಈ ವೇಳೆ, ರಘು ಡ್ರ್ಯಾಗರ್ ತೋರಿಸಿ ಪ್ರಥಮ್‌ಗೆ ಪ್ರಾಣ ಬೆದರಿಕೆ ಹಾಕಿದ್ದರು. ಸ್ಥಳದಲ್ಲಿದ್ದ ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಸಹಾಯಕ್ಕೆ ಬಂದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ಘಟನೆಯ ನಂತರ, ನಟ ಪ್ರಥಮ್ ಪೊಲೀಸ್ ಇಲಾಖೆ ಜೊತೆ ಮಾತನಾಡಿ ಮಾಹಿತಿ ನೀಡಿದ್ದಲ್ಲದೆ, ಎರಡು ದಿನಗಳಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ಅದರಿಂದಲೇ ಪ್ರಕರಣಕ್ಕೆ ಹೊಸ ತಿರುವು ದೊರೆತಿತ್ತು.
ರಘು ಹಾಗೂ ಯಶಸ್ವಿನಿಗೆ ನ್ಯಾಯಾಲಯವು ಷರತ್ತುಗಳೊಂದಿಗೆ ಜಾಮೀನು ಮಂಜೂರಿಸಿದೆ. ಪ್ರತೀ ಭಾನುವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕೆಂಬ ಮುಖ್ಯ ಷರತ್ತನ್ನು ಅವರು ಉಲ್ಲಂಘಿಸಿದ್ದರಿಂದ, ಪೊಲೀಸರು ಮತ್ತೆ ಬಂಧನಕ್ಕೆ ಮುಂದಾಗಿದ್ದಾರೆ.
ವರದಿ : ಲಾವಣ್ಯ ಅನಿಗೋಳ

