ಕನ್ನಡದಲ್ಲಿ ಒಂದಷ್ಟು ಸೌಂಡ್ ಮಾಡಿ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದ ನಟ ರಕ್ಷಿತ್ ಶೆಟ್ಟಿ, ಈಗ ಸುದ್ದಿಯಲ್ಲಿದ್ದಾರೆ. ನಟರಾಗಿ, ನಿರ್ದೇಶಕರಾಗಿಯೂ ಅವರು ಸಾಕಷ್ಟು ಸುದ್ದಿ ಮಾಡಿದವರು. ‘ಉಳಿದವರು ಕಂಡಂತೆ’ ಸಿನಿಮಾ ನಿರ್ದೇಶಿಸಿದ್ದ ಅವರು, ಆ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ರಕ್ಷಿತ್ ಶೆಟ್ಟಿ ಅವರ ನಿರ್ದೇಶನಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವಿದೆ. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ನಿರ್ದೇಶನದಿಂದ ದೂರವಿದ್ದರು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಿರ್ದೇಶನದಿಂದ ದೂರವೇ ಇದ್ದರು. ಸದ್ಯ ರಕ್ಷಿತ್ ಶೆಟ್ಟಿಗೆ ಹೀರೋ ಆಗಿ ನಟಿಸೋಕೆ ಸಾಕಷ್ಟು ಅವಕಾಶಗಳಿವೆ. ಈಗಾಗಲೇ ಒಂದಷ್ಟು ನಿರ್ದೇಶಕರು, ನಿರ್ಮಾಪಕರು ರಕ್ಷಿತ್ ಶೆಟ್ಟಿ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಆದರೆ, ರಕ್ಷಿತ್ ಶೆಟ್ಟಿ ಮಾತ್ರ ಆ ಕಡೆ ಗಮನಹರಿಸಿಲ್ಲ. ಸದ್ಯ ಶೆಟ್ಟರ ಕೈಯಲ್ಲಿ ಐದು ಸಿನಿಮಾಗಳಿವೆ.
ರಕ್ಷಿತ್ ಶೆಟ್ಟಿ ಒಂದರ ಮೇಲೊಂದು ಸಿನಿಮಾ ಮಾಡುವ ಜಾಯಮಾನದವರಲ್ಲ. ಒಂದು ಸಿನಿಮಾ ಒಪ್ಪಿಕೊಂಡರೆ, ನೀಟ್ ಆಗಿ ಮುಗಿಸಿ, ಪ್ರಚಾರ ಕಾರ್ಯ ಮಾಡಿ ನಂತರ ರಿಲೀಸ್ ಆಗುವತನಕವೂ ಆ ಸಿನಿಮಾ ತಂಡದ ಜೊತೆ ನಿಲ್ಲುತ್ತಾರೆ. ಆ ನಂತರ ಬೇರೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಸದ್ಯ ರಕ್ಷಿತ್ ಶೆಟ್ಟಿ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ನಂತರ ಎಲ್ಲೋ ಕಾಣೆಯಾಗಿದ್ದ ರಕ್ಷಿತ್ ಶೆಟ್ಟಿ, ಮೆಲ್ಲ ಸದ್ದು ಮಾಡುತ್ತಿದ್ದಾರೆ. ಹೌದು ಹಲವು ವರ್ಷಗಳ ಹಿಂದಷ್ಟೇ ಘೋಷಣೆ ಮಾಡಿದ್ದ ‘ರಿಚರ್ಡ್ ಆಂಟೋನಿ’ ಸಿನಿಮಾದ ಚಿತ್ರಕಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಒಂದು ಸಿನಿಮಾದ ಚಿತ್ರಕಥೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ, ಈಗ ಬರೋಬ್ಬರಿ ಐದು ಸಿನಿಮಾಗಳ ಸ್ಕ್ರಿಪ್ಟ್ ಜೊತೆ ಬಂದಿದ್ದಾರೆ.
ಹೌದು, ರಕ್ಷಿತ್ ಶೆಟ್ಟಿ ಐದು ಸಿನಿಮಾಗಳ ಚಿತ್ರಕಥೆ ಹಿಡಿದು ಬರುತ್ತಿದ್ದಾರೆ. ‘ರಿಚರ್ಡ್ ಆಂಟೋನಿ’, ‘ಪುಣ್ಯಕೋಟಿ’ ಜೊತೆಗೆ ಇನ್ನೂ ಮೂರು ಸಿನಿಮಾಗಳ ಚಿತ್ರಕಥೆಗಳನ್ನು ರೆಡಿ ಮಾಡಿಕೊಂಡಿದ್ದು, ಆ ಎಲ್ಲಾ ಸಿನಿಮಾಗಳ ಸ್ಕ್ರೀನ್ ಪ್ಲೇ ನಾನು ಅಂದುಕೊಂಡ ರೀತಿಯೇ ಬಂದಿವೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಮಾರ್ಚ್ ಅಂತ್ಯದಿಂದ ‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಎರಡೂ ಸಿನಿಮಾಗಳ ಕೆಲಸ ಒಟ್ಟಿಗೆ ಪ್ರಾರಂಭ ಆಗಲಿವೆ ಎಂಬುದು ಅವರ ಹೇಳಿಕೆ. ‘ಪುಣ್ಯಕೋಟಿ’ ಸಿನಿಮಾಕ್ಕೆ ಸಾಕಷ್ಟು ವಿಎಫ್ಎಕ್ಸ್ ಅಗತ್ಯ ಇರುವುದರಿಂದ ವಿಎಫ್ಎಕ್ಸ್ ಕೆಲಸಗಳನ್ನು ಈಗಿನಿಂದಲೇ ಶುರು ಮಾಡುತ್ತಿದ್ದಾರೆ ರಕ್ಷಿತ್. ‘ರಿಚರ್ಡ್ ಆಂಟೋನಿ’ಗೂ ಸಹ ವಿಎಫ್ಎಕ್ಸ್ ಅಗತ್ಯವಿದೆ. ಆದರೆ ಅಷ್ಟಾಗಿ ಇರುವುದಿಲ್ಲ. ಹಾಗಾಗಿ ಆ ಸಿನಿಮಾದ ಶೂಟಿಂಗ್ ಶೀಘ್ರವೇ ನಡೆಯಲಿದೆ ಎಂಬುದು ರಕ್ಷಿತ್ ಶೆಟ್ಟಿ ಅವರ ಮಾತು.
‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರಿಚ್ಚಿ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೇ ಪಾತ್ರವನ್ನು ಆಧರಿಸಿದ ಸ್ಪಿನ್ ಓವರ್ ಮಾದರಿಯ ಸಿನಿಮಾವನ್ನು ಇದೀಗ ‘ರಿಚರ್ಡ್ ಆಂಟೋನಿ’ ಮೂಲಕ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ರಕ್ಷಿತ್ ಜೊತೆಗೆ ಪ್ರಮೋದ್ ಶೆಟ್ಟಿ ಕೂಡ ನಟಿಸಲಿದ್ದಾರೆ. ಉಳಿದ ಸಿನಿಮಾಗಳ ಪಾತ್ರಗಳ ಕುರಿತು ಘೋಷಣೆ ಇಷ್ಟರಲ್ಲೇ ಮಾಡಲಿದ್ದಾರೆ.
ಅದೇನೆ ಇರಲಿ, ರಕ್ಷಿತ್ ಶೆಟ್ಟಿ ಅವರ ಸಿನಿಮಾ ಯಾವಾಗ ಬರುತ್ತೆ ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ. ಈ ವರ್ಷ ಒಂದು ಸಿನಿಮಾ ಗ್ಯಾರಂಟಿ ಕೊಡುವ ದಿಸೆಯಲ್ಲಿ ಶೆಟ್ರು ಕೆಲಸ ಮಾಡಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯ ನಾಯಕ ನಟರಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಮೇಲೂ ನಿರೀಕ್ಷೆಗಳು ಜಾಸ್ತಿ. ಕಾರಣ, ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಮತ್ತು ಪಾತ್ರ. ಇವೆಲ್ಲದರ ಜೊತೆಗೆ ಅವರು ಕಟ್ಟಿಕೊಡುವ ಸಿನಿಮಾ. ಆ ಕಾರಣದಿಂದಲೇ ರಕ್ಷಿತ್ ಸಿನಿಮಾಗಳನ್ನು ಒಂದು ವರ್ಗ ಎದುರು ನೋಡುತ್ತಲೇ ಇದೆ.



