ನಟಿ ಮೇಲಿನ ಹಲ್ಲೆ ಮತ್ತು ಕ್ರೂರ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, 8ನೇ ಆರೋಪಿ ನಟ ದಿಲೀಪ್ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಮಂದಿ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಸಂಚು ರೂಪಿಸಿದ ಆರೋಪಗಳು ಇವರ ವಿರುದ್ಧ ಸಾಬೀತಾಗಿವೆ. ಈತನಕ ಆರು ವರ್ಷಗಳ ಕಾಲ ವಿಚಾರಣೆ ನಡೆದಿದ್ದು, ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ಅವರು ಅಂತಿಮ ತೀರ್ಪನ್ನು ಘೋಷಿಸಿದ್ದಾರೆ. ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಈ ಘಟನೆಗೆ ಸಂಚು ರೂಪಿಸುವಲ್ಲಿ ದಿಲೀಪ್ ಪ್ರಮುಖ ಪಾತ್ರವಹಿಸಿದ್ದರು ಎಂಬುದು ಪ್ರಾಸಿಕ್ಯೂಷನ್ ಆರೋಪವಾಗಿತ್ತು. ಆದರೆ, ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಹಾಗೂ ಸುಳ್ಳು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ದಿಲೀಪ್ ವಾದಿಸಿದ್ದರು.
2017ರ ಫೆಬ್ರವರಿಯಲ್ಲಿ ಕೊಚ್ಚಿಯಲ್ಲಿ ಚಲಿಸುತ್ತಿದ್ದ ಕಾರಿನೊಳಗೆ ನಟಿಯ ಮೇಲೆ ಪಲ್ಸರ್ ಸುನಿ ಮತ್ತು ತಂಡ ಕ್ರೂರವಾಗಿ ಹಲ್ಲೆ ನಡೆಸಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಈ ಪ್ರಕರಣದಲ್ಲಿ ಒಟ್ಟು ಹತ್ತು ಮಂದಿಯ ವಿರುದ್ಧ ವಿಚಾರಣೆ ನಡೆದಿದ್ದು, 261 ಸಾಕ್ಷಿಗಳನ್ನು ಪ್ರಶ್ನೆ ಮಾಡಲಾಗಿತ್ತು ಮತ್ತು 1700 ಕ್ಕೂ ಹೆಚ್ಚು ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿತ್ತು.
ಮೂವರು ಆರೋಪಿಗಳನ್ನು ಮಾನ್ಯ ಸಾಕ್ಷಿಗಳಾಗಿ ಘೋಷಿಸಲಾಗಿತ್ತು, ಹಾಗೆಯೇ ಇಬ್ಬರು ವಕೀಲರಾದ ರಾಜು ಜೋಸೆಫ್ ಮತ್ತು ಪ್ರತೀಶ್ ಚಾಕೋ ಅವರನ್ನು ಜಿಲ್ಲಾ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಸಂತ್ರಸ್ತ ನಟಿ, 2012ರಿಂದಲೇ ದಿಲೀಪ್ಗೆ ತನ್ನ ಮೇಲೆ ದ್ವೇಷವಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ದಿಲೀಪ್–ಕಾವ್ಯಾ ಮಾಧವನ್ ನಡುವಿನ ಸಂಬಂಧದ ಬಗ್ಗೆ ಮಂಜು ವಾರಿಯರ್ಗೆ ಹೇಳಿದ್ದೇ ಈ ದ್ವೇಷಕ್ಕೆ ಕಾರಣವಾಗಿದ್ದು, ಚಿತ್ರರಂಗದಲ್ಲಿ ತನ್ನ ವಿರುದ್ಧ ನಿಲ್ಲುವವರನ್ನು ‘ಯಾವರೂ ಎತ್ತರಕ್ಕೆ ಬರಲ್ಲ’ ಎಂದು ದಿಲೀಪ್ ಹೇಳಿದ್ದಾನೆಂಬುದನ್ನೂ ಅವರು ಹೇಳಿದ್ದರು.
ವಿಚಾರಣೆ ವೇಳೆ ಮೊದಲ ಆರೋಪಿ ಪಲ್ಸರ್ ಸುನಿ, ದಿಲೀಪ್ ಅವರನ್ನು ಪರಿಚಯವಿಲ್ಲ ಎಂದು ಮೊದಲಿಗೆ ಹೇಳಿದರೂ, ನಂತರ ವಿಚಾರಣೆಯಲ್ಲಿ ಅವರಿಬ್ಬರು ಪರಿಚಿತರೇ ಎಂದು ಒಪ್ಪಿಕೊಂಡಿದ್ದನು. ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ದೃಶ್ಯಗಳನ್ನು ಸೆರೆಹಿಡಿಯುವ ಯೋಜನೆ 2017ರ ಜನವರಿ 3ರಂದು ಗೋವಾದಲ್ಲೇ ಮಾಡಲಾಗಿತ್ತು. ಆದರೆ ನಟಿ ಶೂಟಿಂಗ್ ಮುಗಿಸಿ ಬೇಗ ಹಿಂತಿರುಗಿದ ಕಾರಣ ಕೃತ್ಯ ನೆರವೇರಲಿಲ್ಲ. ನಂತರ ಕೊಚ್ಚಿಯಲ್ಲಿ ದಾಳಿ ನಡೆದಿದೆ. ಪ್ರಕರಣದಲ್ಲಿ ದಿಲೀಪ್ ಅವರನ್ನು 2017ರ ಜುಲೈ 10ರಂದು ಬಂಧಿಸಲಾಗಿತ್ತು ಮತ್ತು 85 ದಿನಗಳ ನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಪಲ್ಸರ್ ಸುನಿ ಸಹ 2024ರಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದನು. ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಅಂತಿಮ ತೀರ್ಪು ಈಗ ಪ್ರಕಟಗೊಂಡಿದ್ದು, ಆರು ಮಂದಿ ದೋಷಿಗಳು ಹಾಗೂ ನಟ ದಿಲೀಪ್ ಖುಲಾಸೆಗೊಂಡಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




