11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯೊಬ್ಬ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲ್ಲೆ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ. ಕಳೆದ 11 ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೇ ಭೂಗತವಾಗಿದ್ದ. ಇದೀಗ ಆರೋಪಿಯನ್ನು ಪತ್ತೆ ಮಾಡುವಲ್ಲಿ, ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಮುರಗೇಶ ಚನ್ನಣ್ಣವರ ತಂಡ ಯಶಸ್ವಿಯಾಗಿದೆ.
ಆರೋಪಿ ಪ್ರಕಾಶ ಹಂಚಿನಮನಿ, ಹುಬ್ಬಳ್ಳಿ ತಾಲೂಕಿನ ಬುಡರಸಿಂಗ್ ಗ್ರಾಮದ ನಿವಾಸಿ . 2014ರಲ್ಲಿ ಆರೋಪಿ ಪ್ರಕಾಶ್ ಹಾಗೂ ಪಕ್ಕದ ಮನೆಯವರಿಗೆ, ಹಳೆ ದ್ವೇಷದ ಕಾರಣಕ್ಕೆ ಜಗಳ ಶುರುವಾಗಿತ್ತು. ಬುಡರಸಿಂಗಿ ಗ್ರಾಮದ ಸ್ಥಳೀಯ ನಿವಾಸಿ ಸೋಮರಾಜ್ ದೇವಲಾಪೂರ, ಜಗಳ ಬೀಡಿಸಲು ಮುಂದಾಗಿದ್ರು. ಆ ವೇಳೆ ಸೋಮರಾಜ್ ಮೇಲೆ ಪ್ರಕಾಶ್ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಅದೇ ವರ್ಷ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ, ಭೀಮಾಬಾಯಿ ಘೋರ್ಪಡೆ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದ.
ನೀರು ಕೇಳುವ ನೆಪದಲ್ಲಿ ಮತ್ತೊಬ್ಬ ಆರೋಪಿ ಜೊತೆ ಹೋಗಿದ್ದ ಪ್ರಕಾಶ್, ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ರು. ಬಳಿಕ ಬಂಧನವಾಗಿದ್ದು ಜಾಮೀನು ಪಡೆದು ಹೊರಗೆ ಬಂದಿದ್ರು. ಇದಾದ ಬಳಿಕ ನ್ಯಾಯಾಲಯಕ್ಕೂ ಹಾಜರಾಗದೇ ಭೂಗತವಾಗಿದ್ದ ಪ್ರಕಾಶನನ್ನು, ಹುಬ್ಬಳ್ಳಿ ಗ್ರಾಮೀಣ ಠಾಣೆ ಕ್ರೈಂ ಸಿಬ್ಬಂದಿ ಚೆನ್ನಪ್ಪ ಬಳ್ಳೊಳ್ಳಿ, ತಿಪ್ಪಣ್ಣ ಆಲೂರು ತಂಡ ಮತ್ತೆ ಜೈಲಿಗಟ್ಟಿದೆ.