ಕಳೆದ ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಜಾತಿಗಣತಿ ಸಮೀಕ್ಷೆ ಶುರುವಾಗಿದೆ. ಆದ್ರೆ, ರಾಜಧಾನಿ ಬೆಂಗಳೂರಲ್ಲಿ ಮಾತ್ರ ಸಮೀಕ್ಷೆ ಸ್ಟಾರ್ಟೇ ಆಗಿರಲಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಅದು ವಿಳಂಬವಾಗಿತ್ತು. ಬರೋಬ್ಬರಿ 12 ದಿನಗಳ ಬಳಿಕ ಬೆಂಗಳೂರಿನ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಇಂದಿನಿಂದ ಆರಂಭವಾಗುತ್ತಿದೆ.
ಅಕ್ಟೋಬರ್ 2ರಂದು 17,500 ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ, ಅಂತಿಮ ತರಬೇತಿ ನೀಡಲಾಗಿದೆ. ಅವರೆಲ್ಲಾ ಇಂದಿನಿಂದ ಮನೆ, ಮನೆಗೆ ಭೇಟಿ ನೀಡಿ ಜಾತಿಗಣತಿಯ ಮಾಹಿತಿ ಸಂಗ್ರಹಿಸಲಿದ್ದಾರೆ. ಅಪರ ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಕೆಎಎಸ್ ಹಿರಿಯ ಅಧಿಕಾರಿಗಳನ್ನು, ನೋಡಲ್ ಅಧಿಕಾರಿಗಳೆಂದು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಒಟ್ಟು 34 ಕೆಎಎಸ್ ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ಸುಗಮವಾಗಿ ನಿರ್ವಹಿಸಲು, ಸಮೀಕ್ಷಾದಾರರು ಮತ್ತು ಸರ್ಕಾರದ ಮಧ್ಯೆ ಸಮನ್ವಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿ ವಾರ್ಡ್‌ಗೆ ಒಬ್ಬರಂತೆ ಗ್ರೂಪ್-A ವೃಂದದ ಅಧಿಕಾರಿಗಳನ್ನು, ವಾರ್ಡ್ ಮೇಲ್ವಿಚಾರಕರಾಗಿ ನೇಮಿಸಲಾಗಿದೆ. ಆ ವಾರ್ಡಿನ ಸಮೀಕ್ಷೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನಿರ್ವಹಿಸಲಿದ್ದಾರೆ. ಪ್ರತಿ 15ರಿಂದ 20 ಸಮೀಕ್ಷಾದಾರರ ಕಾರ್ಯವನ್ನು ಪರಿಶೀಲಿಸಲು, ಒಬ್ಬ ಉಪ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ 300 ಮನೆಗಳಿಗೆ ಒಬ್ಬರಂತೆ ಸಮೀಕ್ಷಾದಾರರನ್ನು ನಿಯೋಜಿಸಿದ್ದು, ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.