ಚಿನ್ನದ ಬಳಿಕ ಬೆಳ್ಳಿ ಇತಿಹಾಸ ಸೃಷ್ಟಿ – ಬೆಳ್ಳಿ ಬೆಲೆಯಲ್ಲಿ ಬಿಗ್ ಬೂಮ್

ದೇಶದಲ್ಲಿ ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿರುವ ನಡುವೆ ಈಗ ಬೆಳ್ಳಿಯ ಬೆಲೆಯೂ ಹೊಸ ಇತಿಹಾಸ ನಿರ್ಮಿಸಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ ಮೊದಲ ಬಾರಿಗೆ ₹2 ಲಕ್ಷ ಗಡಿಯನ್ನು ದಾಟಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ಕಿಲೋಗೆ ₹2,04,000ಕ್ಕೆ ದಾಖಲಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಗುರುವಾರ ಕಿಲೋಗೆ ₹2,01,000 ಇದ್ದ ಬೆಳ್ಳಿ ಬೆಲೆ, ಒಂದೇ ದಿನದಲ್ಲಿ ₹3,000 ಏರಿಕೆಯಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ದಿಲ್ಲಿಯಲ್ಲೂ ಕಿಲೋಗೆ ₹2,04,000 ದರವೇ ದಾಖಲಾಗಿದೆ.

ಬೆಲೆ ಏರಿಕೆಯ ಹಿಂದಿನ ಕಾರಣಗಳು – ಕೈಗಾರಿಕಾ ವಲಯದಲ್ಲಿ ಬೆಳ್ಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸರ್ಕ್ಯೂಟ್ ಬೋರ್ಡ್‌ಗಳು, ವಿದ್ಯುತ್ ಚಾಲಿತ ವಾಹನಗಳು ಹಾಗೂ ಬ್ಯಾಟರಿಗಳ ನಿರ್ಮಾಣದಲ್ಲಿ ಬೆಳ್ಳಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಜೊತೆಗೆ, ಸೌರ ಫಲಕಗಳ ಉತ್ಪಾದನೆಗೆ ಅಗತ್ಯವಿರುವ ಬೆಳ್ಳಿ ಪೇಸ್ಟ್ ಬಳಕೆ ಹೆಚ್ಚಿರುವುದರಿಂದ ಬೇಡಿಕೆ ಮತ್ತಷ್ಟು ಏರಿಕೆಯಾಗಿದೆ.

ದೇಸಿ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಬೆಳ್ಳಿಯ ಖರೀದಿ ಹೆಚ್ಚಾಗಿರುವುದು ಬೆಲೆ ಮೇಲೆ ಒತ್ತಡ ತಂದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಏರಿಕೆಗೆ ಕಾರಣವಾಗಿದೆ. ಇದಲ್ಲದೆ, ಏಷ್ಯಾದ ರಾಷ್ಟ್ರಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿದೇಶಿ ಮಾರಾಟಗಾರರು ಬೇಡಿಕೆಯನ್ನು ಪೂರೈಸಲು ಕಷ್ಟಪಡುತ್ತಿರುವುದರಿಂದ ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author