ರಾಜಕೀಯ ಪಕ್ಷಗಳಿಗೆ ವರ್ಷದ ಮೊದಲ ‘ಮಿನಿ ಮತ ಸಮರ’ ಎದುರಿಸಲು ಕಾಲಮಿತಿ ನಿಗದಿಯಾಗಿದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಬಹುತೇಕ ಏಪ್ರಿಲ್- ಮೇ ತಿಂಗಳಿನಲ್ಲಿ ನಡೆಯಲಿದ್ದು, ಅದಾಗುತ್ತಿದ್ದಂತೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಐದು ಮಹಾನಗರ ಪಾಲಿಕೆಗಳಿಗೆ ‘ಚುನಾವಣೆ ಪರೀಕ್ಷೆ’ ನಡೆಯಲಿದೆ. ಒಂದು ಕೋಟಿಗಿಂತ ಹೆಚ್ಚು ಮತದಾರರು ರಾಜಕೀಯ ಪಕ್ಷಗಳಿಗೆ ಅಂಕ ನೀಡಲಿದ್ದಾರೆ.
ಬೆಂಗಳೂರು ಮಹಾನಗರದ ಆಡಳಿತಾತ್ಮಕ ಸ್ವರೂಪ ಬದಲಾದ ನಂತರ, ಈಗ ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಜೂನ್ ಗಡುವು ನೀಡಿದೆ. ಸುಪ್ರೀಂ ಆದೇಶದ ಬೆನ್ನಲ್ಲೇ ರಾಜಕೀಯ ವಲಯಗಳಲ್ಲಿ ಚುನಾವಣಾ ಚರ್ಚೆ ಆರಂಭವಾಗಿದೆ. ವಾರ್ಡ್ ಮರುವಿಂಗಡಣೆ ಮತ್ತು ಮೀಸಲಾತಿ ಗೊಂದಲಗಳ ನಡುವೆಯೂ ಪ್ರಜಾಪ್ರಭುತ್ವದ ಹಬ್ಬಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಬೆಂಗಳೂರು ಈಗ ಹಳೆಯ ಬಿಬಿಎಂಪಿ ವ್ಯಾಪ್ತಿಗಷ್ಟೇ ಸೀಮಿತ ವಾಗಿಲ್ಲ. ‘ಗ್ರೇಟರ್ ಬೆಂಗಳೂರು’ ಪರಿಕಲ್ಪನೆಯಡಿ ಪಾಲಿಕೆಗಳ ವಿಭಜನೆಯಾಗಿರುವುದು ಈ ಬಾರಿಯ ವಿಶೇಷ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಇದು ತನ್ನ ಗ್ಯಾರಂಟಿ ಯೋಜನೆಗಳ ಪ್ರಭಾವವನ್ನು ನಗರ ಪ್ರದೇಶದಲ್ಲಿ ಪರೀಕ್ಷಿಸಲು ಇರುವ ಅಗ್ನಿಪರೀಕ್ಷೆ. ಮತ್ತೊಂದೆಡೆ, ನಗರದ ಮತದಾರರ ಮೇಲೆ ಸಾಂಪ್ರದಾಯಿಕ ಹಿಡಿತ ಹೊಂದಿರುವ ಬಿಜೆಪಿ, ಈ ಹೊಸ ಸ್ವರೂಪದ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸರ್ವಪ್ರಯತ್ನ ನಡೆಸುತ್ತಿದೆ.
ನವದೆಹಲಿ ಜಿಬಿಎ ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳಿಗೆ ಜೂನ್ 30ರ ಒಳಗಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚುನಾವಣಾ ಪ್ರಕ್ರಿಯೆಯನ್ನು ಜೂನ್ ಅಂತ್ಯದೊಳಗೆ ಮುಕ್ತಾಯಗೊಳಿಸುವಂತೆ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾ. ಜೋಯಮಲ್ಯ ಬಾಗಿ ಅವರಿದ್ದ ಪೀಠ ಗಡುವು ವಿಧಿಸಿದೆ.
ವರದಿ : ಲಾವಣ್ಯ ಅನಿಗೋಳ




