ಬೆಂಗಳೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿರುವ ರಾಜೀನಾಮೆಯ ಸವಾಲನ್ನು ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸ್ವೀಕರಿಸುವ ಮೂಲಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಇಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ವೈಯಕ್ತಿಕ ತೇಜೋವಧೆ..
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನಗೆ ನಿಂದನೆ ಮಾಡಿದ್ದರು. ನನ್ನ ಪೂರ್ವಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಇಂತಹ ಮಾತುಗಳನ್ನು ಸಹಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ನಾನು ಸ್ಪೀಕರ್ ಅವರಿಗೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಬಸನಗೌಡ ಪಾಟೀಲ್ ಯತ್ನಾಳ್ ಸವಾಲನ್ನು ಸ್ವೀಕರಿಸಿದ್ದೇನೆ. ಯತ್ನಾಳ್ ಅವರು ರಾಜೀನಾಮೆ ನೀಡಲಿ, ನಾನು ವಿಜಯಪುರದಲ್ಲಿ ಚುನಾವಣೆ ಎದುರಿಸುತ್ತೇನೆ. ಇಲ್ಲವಾದರೆ ಯತ್ನಾಳ್ ಬಸವನಬಾಗೇವಾಡಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಶಿವಾನಂದ ಪಾಟೀಲ್ ಪ್ರತಿ ಸವಾಲು ಹಾಕಿದ್ದಾರೆ.
ಯತ್ನಾಳ್ ಹಚಡ ಅನ್ನೋ ವಿಚಾರವನ್ನು ಎಳೆದು ತಂದಿದ್ದಾರೆ…
ಪೂರ್ವಜರ ಕುರಿತು ಹಳೆಯ ಘಟನೆಯೊಂದನ್ನು ಯತ್ನಾಳ್ ಮೆಲುಕು ಹಾಕಿ ಮಾತನ್ನಾಡಿದ್ದಾರೆ. ನಮ್ಮ ಪೂರ್ವಜನರು ಅಡ್ಡ ಹೆಸರು ಯಾಕೆ ಇಟ್ಟುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ತಂದೆಯವರು ಪಾಟೀಲರಾಗಿದ್ದರು. ನಾನು ಹುಟ್ಟುವಾಗಲೇ ಅವರು ಪಾಟೀಲರಾಗಿದ್ದರು. ಅವರು ಹೇಗೆ ಪಾಟೀಲರು ಆದರು ಅನ್ನೋದ್ರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಯತ್ನಾಳ್ ಹಚಡ ಅನ್ನೋ ವಿಚಾರವನ್ನು ಎಳೆದು ತಂದಿದ್ದಾರೆ. ಇದರಿಂದ ನನಗೆ ನೋವು ಆಯಿತು. ನನ್ನನ್ನು ಈ ರೀತಿಯಾಗಿ ಯತ್ನಾಳ್ ನಿಂದಿಸಿದ್ದಾರೆ. ಹಾಗೆ ನೋಡೋದಾದರೆ ನಮ್ಮ ತಂದೆಯವರು, ಯತ್ನಾಳ್ ತಂದೆಯವರು ತುಂಬಾನೇ ಆತ್ಮೀಯರು. ಬ್ಯುಸಿನೆಸ್ ಪಾರ್ಟ್ನರ್ ಕೂಡ ಹೌದು. ಆದರೆ ಅವರು ನನಗೆ ಮಾಡಿರುವ ವೈಯಕ್ತಿಕ ತೇಜೋವಧೆಯನ್ನು ಖಂಡಿಸುತ್ತೇನೆ. ಅಲ್ಲದೇ ಅವರು ನನಗೆ ರಾಜಕೀಯವಾಗಿ ಸವಾಲು ಹಾಕಿದ್ದಾರೆ. ನೀವು ಗಂಡಸರೇ ಆಗಿದ್ದರೆ ಸ್ಪೀಕರ್ಗೆ ರಾಜೀನಾಮೆ ನೀಡಿ, ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ ಎಂದಿದ್ದಾರೆ. ಅವರ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.
ಯತ್ನಾಳ್ ರಾಜೀನಾಮೆ ಕೊಟ್ರೆ ಮಾತ್ರ ಅಂಗೀಕರಿಸಿ..!
ಇನ್ನೂ ಪ್ರಮಖವಾಗಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ನೀಡಿರುವ ರಾಜೀನಾಮೆ ಪತ್ರದಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ, ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ್ ಯತ್ನಾಳ್ ರವರು ತಮ್ಮ ವಿಜಯಪುರ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ, ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ, ಬಸನಗೌಡ ಆರ್. ಪಾಟೀಲ್ ಯತ್ನಾಳ್ ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ, ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಶಿವಾನಂದ ಪಾಟೀಲ್ ಸ್ಪೀಕರ್ ಅವರಿಗೆ ನೀಡಿರುವ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪರಿಶೀಲಿಸಿ ಕ್ರಮ..
ಇನ್ನೂ ಶಿವಾನಂದ ಪಾಟೀಲ್ ಅವರ ರಾಜೀನಾಮೆ ಪತ್ರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿರುವ ಸ್ಪೀಕರ್ ಯು.ಟಿ. ಖಾದರ್, ಶಿವಾನಂದ ಪಾಟೀಲ್ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಶಾಸಕ ಸ್ಥಾನವೆಂದರೆ ಒಂದು ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆಯಾಗಿರುತ್ತದೆ. ಇದಕ್ಕಾಗಿಯೇ ರಾಜಕೀಯ ನಾಯಕರು ತಮ್ಮದೇ ಆದ ರೀತಿಯಲ್ಲಿ ಕಸರತ್ತನ್ನು ಮಾಡಿರುತ್ತಾರೆ. ಹೀಗಿರುವಾಗ ಒಂದು ಸವಾಲಿನ ಸಲುವಾಗಿಯೇ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿರುವುದರ ಹಿಂದೆ ಏನಾಗಿದೆ ಎನ್ನುವುದನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿ ನೋಡಬೇಕಾಗುತ್ತದೆ. ಅದರಲ್ಲಿ ಮತ್ತದೇ ರಾಜಕಾರಣ, ನಾಲಿಗೆಯ ಸಂಘರ್ಷ ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.
ಇಬ್ಬರೂ ರಾಜೀನಾಮೆ ಅಂಗೀಕರಿಸಿಕೊಂಡು ಬನ್ನಿ..
ಇನ್ನೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು, ಶಿವಾನಂದ ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಒಂದು ವಾರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಸಭಾಪತಿಯವರಿಂದ ಅಂಗೀಕಾರ ಮಾಡಿಕೊಂಡು ಬನ್ನಿ. ನೀವು ಪಕ್ಷೇತರರಾಗಿ ಬನ್ನಿ ನಾನು ಬರ್ತೀನಿ, ಬಾಗೇವಾಡಿಯಲ್ಲೇ ಬಂದು ಮಣ್ಣು ಕೊಡುತ್ತೇನೆ. ರಾಜೀನಾಮೆ ನೀಡದಿದ್ದರೆ ಇವರು ಅಪ್ಪನಿಗೆ ಹುಟ್ಟಿಲ್ಲ ಅಂತ ನಾನು ಹೇಳುತ್ತೇನೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಇವರೆಲ್ಲರಿಗೂ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇನೆ ಎಂದು ಗುಡುಗಿದ್ದರು.
ಶಿವಾನಂದ ಪಾಟೀಲ್ ಅಪ್ಪನಿಗೆ
ಇದರ ಜೊತೆಗೆ ಸಚಿವ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ, ಯಶವಂತರಾಯಗೌಡ ಪಾಟೀಲ ಅಂತಹ ಹರಾಮ್‌ಕೋರರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ನನಗೆ ಪಕ್ಷೇತರರಾಗಿ ಸ್ಪರ್ಧೆ ಮಾಡು ಎಂದು ಪಂಥಾಹ್ವಾನ ಕೊಟ್ಟಿರೋ ಶಿವಾನಂದ ಪಾಟೀಲ, ವಿಜಯಾನಂದ ಕಾಶಪ್ಪನವರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಪರ್ಧೆ ಮಾಡಲಿ. ಶಿವಾನಂದ ಪಾಟೀಲ್ ಸ್ವತಃ ವಿಜಯಪುರಕ್ಕೆ ಬರ್ತೀನಿ ಎನ್ನುತ್ತಿದ್ದಾನೆ, ಬಾಗೇವಾಡಿಯಲ್ಲಿಯೂ ಏನೂ ಸಿಗುತ್ತಿಲ್ಲ, ಹೀಗಾಗಿ ವಿಜಯಪುರಕ್ಕೆ ಬರುತ್ತೇನೆ ಎನ್ನುತ್ತಿದ್ದಾನೆ. ವಿಜಯಪುರದಲ್ಲಿ ಹಿಂದೂ ಹಾಗೂ ಮುಸ್ಲಿಮರು ಇವನಿಗೆ ವೋಟ್ ಹಾಕಲ್ಲ. ಕಾಶಪ್ಪನವರ ಅಪ್ಪನಿಗೆ ಹುಟ್ಟಿದ್ರೆ ಬಾ, ನಿನ್ನ ಮುಖ ನೋಡಿದರೆ ನೀ ಯಾರಿಗೆ ಹುಟ್ಟಿದ್ದೀಯಾ ಎಂದು ಗೊತ್ತಾಗುತ್ತದೆ. ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದೀಯಾ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾರ್‍ಯಾರ ಬಳಿ ಹಣ ತಂದಿದ್ದೀಯಾ ಗೊತ್ತು. ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಬಳಿ ಎಷ್ಟು ಹಣ ತಂದಿದ್ದೀಯಾ ಗೊತ್ತು. ನೀನು ಮಹಾಭ್ರಷ್ಟ್ರ ಲೋಫರ್ ಎಂದು ಕಾಶಪ್ಪನವರ ವಿರುದ್ಧ ಯತ್ನಾಳ್ ಏಕ ವಚನದಲ್ಲಿ ಟೀಕಾಪ್ರಹಾರ ನಡಸಿದ್ದರು. ಇದೇ ಸವಾಲನ್ನು ಸ್ವೀಕರಿಸಿರುವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೂ ಇದಕೆಲ್ಲ ಕಾರಣರಾಗಿರುವ ಯತ್ನಾಳ್ ನಡೆಯು ತೀವ್ರ ಕುತೂಹಲ ಮೂಡಿಸಿದೆ.