ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಹಾಕಿದ್ದ ಬರಹಗಾರ ಅಹೋರಾತ್ರಾ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ ಸೂಚಿಸಿದ್ರೂ ಅಹೋರಾತ್ರಾ ಅವರು ಪೋಸ್ಟ್ ಡಿಲೀಟ್ ಮಾಡಿರಲಿಲ್ಲ. ನಿಗದಿಪಡಿಸಿದ ದಿನ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ 11ನೇ ಸಿಸಿಹೆಚ್ ನ್ಯಾಯಾಲಯ, ಅಹೋರಾತ್ರಾಗೆ 15 ದಿನಗಳ ಕಾಲ ಸೆರೆವಾಸ ವಿಧಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಅಹೋರಾತ್ರಾ ಅವ್ರು ಪ್ರತಿಕ್ರಿಯಿಸಿದ್ದಾರೆ. ನಾನಿನ್ನೂ ಅರೆಸ್ಟ್ ಆಗಿಲ್ಲ. ಭಾರತದ ಸಂವಿಧಾನ, ನ್ಯಾಯಾಂಗಕ್ಕೆ ತುಂಬಾ ಗೌರವ ಕೊಡ್ತೀನಿ, ಬದ್ಧನಾಗಿದ್ದೇನೆ. ನಾನು 2 ದಿನದಿಂದ ಕಾಯುತ್ತಿದ್ದೇನೆ. 15 ದಿನ ನಾನು ಗೌರವದಿಂದ ಒಳಗೆ ಹೋಗ್ತೀನಿ. 2023ರಲ್ಲಿ ಸೌಜನ್ಯ ಹತ್ಯಾಕಾಂಡಕ್ಕೆ ಸ್ಪಂದಿಸಿದ್ದು ನಿಜ. ಬರಹಗಾರನಾಗಿ ನನ್ನ ಪೇಜ್‌ನಲ್ಲಿ ಭಾವನೆಗಳನ್ನು ಹಂಚಿಕೊಂಡಿದ್ದೆ. ಆದ್ರೀಗ ಆ ಪೇಜೇ ಇಲ್ಲ. ಆ ಪೇಜ್ ಮುಕ್ತಾಯ ಆಗಿದೆ. ಆ ಪೇಜ್ ನಮ್ಮ ಹಿಡಿತದಲ್ಲೂ ಇಲ್ಲ.
ಸೀನಪ್ಪ ಎಂಬುವರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವ ಬಗ್ಗೆ, ಅಹೋರಾತ್ರಾ ಮಾತನಾಡಿದ್ದಾರೆ. ಆ ಸೀನಪ್ಪ ಯಾರು ಅನ್ನೋದೇ ಗೊತ್ತಿಲ್ಲ. ಅವರಿಗೂ ನನಗೂ ಸಂಬಂಧವೇ ಇಲ್ಲ. ಅತ್ಯಾಚಾರ ನಡೆದ ಸ್ಥಳದಲ್ಲಿ ಹಿರಿಯರಿಗೆ ಕವಿಯಾಗಿ ಪ್ರಶ್ನೆ ಕೇಳಿದ್ದೇನೆ. ನೋವಾಗಿದ್ದವರು ಪ್ರಶ್ನೆ ಮಾಡಬೇಕಿತ್ತು. ಈ ಸೀನಪ್ಪ ಎಲ್ಲಿಂದ ಬಂದ್ರೋ ಗೊತ್ತಿಲ್ಲ.
ನಾನು ಎಂದಿಗೂ ಲಾಯರ್ ಇಟ್ಟುಕೊಳ್ಳುವುದಿಲ್ಲ. ನಾನೂ ಯಾರ ಜೊತೆಯೂ ಇಲ್ಲ. ನನ್ನ ಶಾಯಿ, ಪೆನ್ನು ಬಿಟ್ರೆ, ನನಗೆ ಯಾರ ಸಾಂಗತ್ಯವೂ ಇಲ್ಲ. ನನ್ನ ಮಗಳೇ ಸೌಜನ್ಯ ಎಂದು ತಿಳಿದು ಪ್ರಶ್ನಿಸಿದ್ದೇನೆ. ಆ ಪ್ರಶ್ನೆ ತಪ್ಪು ಅಂತಾ ಅನ್ನಿಸಿಯೇ ಇಲ್ಲ. ನ್ಯಾಯಾಲಯಕ್ಕೆ ತಪ್ಪು ಅನ್ನಿಸಿದ್ರೆ, ಅವರು ಕೊಟ್ಟ ಶಿಕ್ಷೆಗೆ ನಾನು ಗೌರವದಿಂದ ಬಾಧ್ಯನಾಗಿದ್ದೇನೆ. ದೇವರನ್ನು ನಂಬಿ ಬದುಕುತ್ತಿದ್ದೇನೆ. ಜೀವನ ಪರ್ಯಂತ ನಾನು ಬರೆದಿದ್ದಕ್ಕೆ ಬಾಧ್ಯನಾಗಿರುತ್ತೇನೆ. ಎಲ್ಲಾ ಶಿಕ್ಷೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ.
ಪೊಲೀಸರು ನನ್ನನ್ನು ಸಂಪರ್ಕಿಸಿದ್ರೆ, ಗೌರವದಿಂದ ಎದುರು ನಿಲ್ಲುತ್ತೇನೆ. ದೇವರು ಎಷ್ಟು ಶಿಕ್ಷೆ ಕೊಟ್ರು ಅಷ್ಟು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ. ಆ ಮಗುವಿಗಾಗಿ ದನಿ ಎತ್ತಿದ್ದಕ್ಕೆ ಗೌರವದಿಂದ ಶಿಕ್ಷೆ ಅನುಭವಿಸುತ್ತೇನೆ. ನಾನೇ ಪೋಸ್ಟ್ ಹಾಕಿದ್ದು, ನಾನೇ ಬರೆದಿದ್ದು. ಯಾರಿಗೂ ಅಸಭ್ಯ, ಆಶ್ಲೀಲ ಪದ ಬಳಸಿಲ್ಲ. ಕೇವಲ ಖಂಡಿಸಿದ್ದೇನೆ. ಪ್ರಶ್ನೆ ಕೇಳಿದ್ದೇನೆ. ಹೀಗಂತ ಬರಹಗಾರ ಅಹೋರಾತ್ರಾ ಹೇಳಿದ್ದಾರೆ.

