ದೇಶದಾದ್ಯಂತ ಬಹುಪಥ ಮುಕ್ತ ಹರಿವು ಟೋಲ್ ವ್ಯವಸ್ಥೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹೆದ್ದಾರಿ ನಿರ್ವಹಣಾ ತಂತ್ರಜ್ಞಾನವನ್ನು 2026ರ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಈ ನೂತನ ವ್ಯವಸ್ಥೆ ಜಾರಿಗೆ ಬಂದ ನಂತರ ಟೋಲ್ ಪ್ಲಾಜಾಗಳಲ್ಲಿ ಪ್ರಯಾಣಿಕರು ಕಾಯಬೇಕಾದ ಅವಶ್ಯಕತೆಯೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಡ್ಕರಿ, “ಹೊಸ ತಂತ್ರಜ್ಞಾನ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ. ಇದರಿಂದ ಪ್ರಯಾಣಿಕರ ಅಮೂಲ್ಯ ಸಮಯ ಉಳಿಯಲಿದೆ. ಜೊತೆಗೆ ವರ್ಷಕ್ಕೆ ಸುಮಾರು ₹1,500 ಕೋಟಿ ಮೌಲ್ಯದ ಇಂಧನ ಉಳಿತಾಯ ಸಾಧ್ಯವಾಗಲಿದೆ” ಎಂದು ಹೇಳಿದರು.
ಇದೇ ವೇಳೆ, ಈ ವ್ಯವಸ್ಥೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹6,000 ಕೋಟಿ ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು. 2026ರ ಅಂತ್ಯದೊಳಗೆ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂಬುದು ನಿಶ್ಚಿತ ಎಂದು ಪುನರುಚ್ಚರಿಸಿದ ಗಡ್ಕರಿ, ಅದಾದ ಬಳಿಕ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ದಿನಗಳು ಮುಗಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರದಿ : ಲಾವಣ್ಯ ಅನಿಗೋಳ




