ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಚ್ಚರಿಸಿದ್ದಾಯ್ತು. ನೋಟಿಸ್ ಕೊಟ್ಟು ಬಾಯಿ ಮುಚ್ಚಿಸೋ ಪ್ರಯತ್ನ ಮಾಡಿದ್ದಾಯ್ತು. ಮಾತಲ್ಲಿ ಎಷ್ಟೇ ಕ್ಲಾರಿಟಿ ಕೊಟ್ರು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ, ಸಿಎಂ ಬದಲಾವಣೆ ಕಿಚ್ಚು ಶಮನವಾಗುತ್ತಲೇ ಇಲ್ಲ. ಪೂರ್ಣಾವಧಿ ಸಿಎಂ ನಾನೇ ಅಂತಾ ಸಿದ್ದರಾಮಯ್ಯ ಹೇಳುತ್ತಲೇ ಇದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಸಿಎಂ ಬದಲಾವಣೆ ಸದ್ಯಕ್ಕಿಲ್ಲ ಅಂತಾ ಹೇಳಿದ್ದಾರೆ. ಇಷ್ಟಾದ್ರೂ ಬೆಂಬಲಿಗರ ಪಡೆ ತಮ್ಮ ಒತ್ತಾಯ, ಆಗ್ರಹ ಮಾಡುವುದನ್ನ ಮುಂದುವರೆಸಿದ್ದಾರೆ.
ಇದೀಗ AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಯಾರೂ ಮೂಗು ತೂರಿಸಬೇಡಿ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಪಕ್ಷದೊಳಗೆ ಯಾವಾಗ ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಸಿಎಂ 5 ವರ್ಷವೋ, ಎರಡೂವರೆ ವರ್ಷವೋ ಎಂಬುದನ್ನು ತೀರ್ಮಾನ ಮಾಡಲು ಪಕ್ಷ ಸಮರ್ಥವಾಗಿದೆ ಎಂದು ಗರಂ ಆಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು, ವೇಣುಗೋಪಾಲ್ ಭೇಟಿಯಾಗಿದ್ರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವೇಣುಗೋಪಾಲ್, ಸಿಎಂ ಬದಲಾವಣೆ ಕುರಿತಂತೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ, ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ, ಕೆಲವರು ತಮ್ಮ ಭಾವನೆ ವ್ಯಕ್ತಪಡಿಸುವಾಗ ಪಕ್ಷದ ಶಿಸ್ತಿನ ಚೌಕಟ್ಟು ಮೀರಿ ಮಾತನಾಡಿದ್ದಾರೆ. ಇದನ್ನು ಗಮನಿಸುವಂತೆ, ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ರು. ಕೈ ನಾಯಕರ ಈ ಮಾತುಗಳನ್ನ ಗಮನಿಸಿದ್ರೆ ನವೆಂಬರ್ ಕ್ರಾಂತಿಯ ಸದ್ದು, ಗದ್ದಲ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ.