ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ AIMIM ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡೋಕೆ ಸಿದ್ಧವಿದೆ. ಹೀಗಂತ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಆದರೆ, ಪಕ್ಷಕ್ಕೆ ಕನಿಷ್ಠ 6 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಶರತ್ತನ್ನು ಅವರು ಮುಂದಿಟ್ಟಿದ್ದಾರೆ.
ನಾವು ಇಂಡಿಯಾ ಮೈತ್ರಿಕೂಟ ಸೇರಲು ಸಿದ್ಧವಿದ್ದೇವೆ. ಬಿಹಾರದಲ್ಲಿ ಸ್ಪರ್ಧಿಸಲು ನಮಗೆ 6 ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿದ್ದೇವೆ. ಈ ಕುರಿತು ಈಗಾಗಲೇ ನಮ್ಮ ಪಕ್ಷದ ನಾಯಕರು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಅಥವಾ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಅಂತ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಒಳಚುನಾವಣೆ ಸಂಬಂಧ ಕೂಡ ಮಾತನಾಡಿದ್ದಾರೆ. ಅಧಿಕಾರಕ್ಕೆ ಬಂದರೆ ನಮಗೆ ಸಚಿವ ಸ್ಥಾನ ಬೇಕೆಂಬ ಬೇಡಿಕೆಯಿಲ್ಲ. ಬದಲಿಗೆ, ಬಿಹಾರದ ಸೀಮಾಂಚಲ್ ಭಾಗದ ಅಭಿವೃದ್ಧಿಗೆ ‘ಸೀಮಾಂಚಲ್ ಅಭಿವೃದ್ಧಿ ಮಂಡಳಿ’ ಸ್ಥಾಪಿಸಿ ಕೆಲಸ ಮಾಡಿದರೆ ಸಾಕು. ಆದರೆ, ನಾವು ಹಲವು ಬಾರಿ ಪತ್ರ ಬರೆದರೂ ಆರ್‌ಜೆಡಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿಯ ಬಿ-ಟೀಮ್ ಎನ್ನುತ್ತಾರೆ. ಆದರೆ ನಾವು ದೇಶದ ಜನತೆಗೆ ನೇರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದಿದ್ದಾರೆ.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯವಾಗಿ ಮಹತ್ವದ ಸೀಮಾಂಚಲ್ ಪ್ರದೇಶದಲ್ಲಿ AIMIM ಐದು ಸ್ಥಾನಗಳನ್ನು ಗೆದ್ದಿತ್ತು. ಆದರೆ ನಂತರ, ನಾಲ್ವರು ಶಾಸಕರು ಆರ್‌ಜೆಡಿಗೆ ಸೇರ್ಪಡೆಯಾಗಿದ್ದಾರೆ.
AIMIM ಶಾಸಕ ಅರುಲ್ ಇಮಾನ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾವು ನಿರಂತರವಾಗಿ ಇಂಡಿಯಾ ಕೂಟದ ನಾಯಕರನ್ನು ಸಂಪರ್ಕಿಸುತ್ತಿದ್ದೇವೆ. ಆದರೆ ಅವರು ಈ ಬಾರಿಗೆ ಚುನಾವಣೆ ಸ್ಪರ್ಧೆಯಲ್ಲಿ AIMIM ಗೆ ಅವಕಾಶ ನೀಡಲು ನಿರಾಕರಿಸಿದ್ದಾರೆ. ನಮ್ಮ ಪಕ್ಷದ ನಾಲ್ವರು ಶಾಸಕರು ಈಗಾಗಲೇ ಆರ್‌ಜೆಡಿಗೆ ಸೇರಿದ್ದರೂ, ನಾವು ಮೈತ್ರಿಗೆ ಮುಕ್ತಮನದಿಂದ ಸಿದ್ಧವಿದ್ದೇವೆ ಎಂದಿದ್ದಾರೆ.