ಬಾಗಲಗುಂಟೆಯಲ್ಲಿ ಐಶ್ವರ್ಯ ಆತ್ಮಹತ್ಯೆ: ನವವಿವಾಹಿತೆಗೆ ಕಾಡ್ತಿದ್ದ ನೋವೇನು?

ಹಸೆಮಣೆ ಏರಿ ಇನ್ನೂ ತಿಂಗಳು ತುಂಬುವ ಮೊದಲೇ ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ, ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ 24 ವರ್ಷದ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ನವೆಂಬರ್ 27ರಂದು ಬೆಂಗಳೂರಿನ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ಎಂಬುವವರ ಜೊತೆ, ವಿಜೃಂಭಣೆಯಿಂದ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ಮೊದಲ ದಿನದಿಂದಲೇ ದಂಪತಿ ನಡುವೆ ಕಲಹ ಆರಂಭವಾಗಿತ್ತು ಎನ್ನಲಾಗಿದೆ. ಗಂಡ ಲಿಖಿತ್ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಿಮ್ಮ ಮಗಳನ್ನು ನಿಮ್ಮ ಮನೆಗೇ ಕರೆದುಕೊಂಡು ಹೋಗಿ ಎಂದು ಲಿಖಿತ್, ಪತ್ನಿ ಐಶ್ವರ್ಯಾ ಪೋಷಕರಿಗೆ ಪದೇ ಪದೇ ಹೇಳುತ್ತಿದ್ದ ಎನ್ನಲಾಗಿದೆ.

ಬುಧವಾರ ಬೆಳಗ್ಗೆಯಷ್ಟೇ ಐಶ್ವರ್ಯ ಪೋಷಕರು ಮಲ್ಲಸಂದ್ರದ ಗಂಡನ ಮನೆಗೆ ಬಂದು, ರಾಜಿ ಸಂಧಾನ ಮಾಡಿಸಿದ್ದರು. ಇನ್ಮುಂದೆ ಚೆನ್ನಾಗಿ ಬಾಳಿ ಎಂದು ಬುದ್ಧಿ ಹೇಳಿ ಪೋಷಕರು ಮದ್ದೂರಿಗೆ ಮರಳಿದ್ದರು. ಆದರೆ ಪೋಷಕರು ಊರು ತಲುಪುವಷ್ಟರಲ್ಲೇ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಗೆ ಮರಳಿದ ಪೋಷಕರಿಗೆ, ಮಗಳ ಸಾವಿನ ಸುದ್ದಿ ತಿಳಿದು ಬರಸಿಡಿಲು ಬಡಿದಂತಾಗಿತ್ತು.

ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಇದು ಗಂಡ ಮತ್ತು ಅತ್ತೆ ಸೇರಿ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಿಖಿತ್ ಸಿಂಹ ಮತ್ತು ಆತನ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

About The Author