Wednesday, November 26, 2025

Latest Posts

ಆಳಂದ ವೋಟ್ ಚೋರಿ ತನಿಖೆ – ಸಾವಿರಕ್ಕೂ ಹೆಚ್ಚು ಹೇಳಿಕೆ ದಾಖಲು

- Advertisement -

2023ರ ಆಳಂದ ವಿಧಾನಸಭಾ ಚುನಾವಣೆಯಲ್ಲಿ ನಡೆದಿದ್ದ ವೋಟ್ ಚೋರಿ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ರಚಿಸಿದ್ದ ಎಸ್‌ಐಟಿ ತನಿಖೆ ಗಂಭೀರ ಹಂತ ಪ್ರವೇಶಿಸಿದೆ. ಮೊದಲ ಹಂತದಲ್ಲಿ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ತನಿಖಾ ತಂಡ ಈಗ ಎರಡನೇ ಹಂತದ ಪರಿಶೋಧನೆಗೆ ಇಳಿದಿದೆ.

ಎರಡನೇ ಹಂತದ ತನಿಖೆಯ ಭಾಗವಾಗಿ, ಎಸ್‌ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದಲೇ ಆಳಂದದಲ್ಲಿ ತಂಗಿದ್ದು, ಪ್ರಕರಣಕ್ಕೆ ನೇರವಾಗಿ ಸಂಬಂಧಿಸಿದ ಮತದಾರರ ಹೇಳಿಕೆಗಳನ್ನು ಸ್ವಯಂ ಸ್ಥಳದಲ್ಲೇ ದಾಖಲಿಸುತ್ತಿದ್ದಾರೆ. 2023ರ ಚುನಾವಣೆಯ ಸಮಯದಲ್ಲಿ ಒಟ್ಟು 6,018 ಮತಗಳನ್ನು ಡಿಲೀಟ್ ಮಾಡುವ ಉದ್ದೇಶದಿಂದ ಫಾರ್ಮ್ ನಂ. 7 ಸಲ್ಲಿಕೆಯಾಗಿದ್ದು, ಅದೇ ಪ್ರಕರಣದ ಮೇಲೆ ಈಗ ತನಿಖೆ ಕೇಂದ್ರೀಕೃತವಾಗಿದೆ.

ಈ ಮತಗಳ ಡಿಲೀಟ್ ಪ್ರಪೋಸಲ್ ಸಂಬಂಧಿಸಿದಂತೆ ಕಳೆದ ಒಂದೇ ತಿಂಗಳಲ್ಲಿ ಸಾವಿರಕ್ಕೂ ಅಧಿಕ ಜನರಿಂದ ಹೇಳಿಕೆಗಳನ್ನು ಎಸ್‌ಐಟಿ ಪಡೆಯಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಅರ್ಜಿದಾರರು ತಮ್ಮ ಹೆಸರಿನಲ್ಲಿ ಮತ ಡಿಲೀಟ್ ಅರ್ಜಿ ಸಲ್ಲಿಕೆಯಾಗಿದ್ದ ವಿಚಾರವೇ ತಮಗೆ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೊನೆಯ ಹಂತದಲ್ಲಿ ತಮ್ಮ ಮತ ಅಳಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದ ನಂತರ ಅದು ತಡೆಗಟ್ಟಲಾಗಿದೆ ಎಂದು ಬಹುತೇಕರು ಹೇಳಿಕೆ ನೀಡಿದ್ದಾರೆ.

ಇದೇ ಪ್ರಕರಣದಲ್ಲಿ ಸುಮಾರು 250 ಅಂಗನವಾಡಿ ಕಾರ್ಯಕರ್ತೆಯರ ಹೇಳಿಕೆಗಳನ್ನು ಸಹ ಎಸ್‌ಐಟಿ ಪಡೆದುಕೊಂಡಿದೆ. ಇವರೂ ಕೂಡ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೇಳಿಕೆಗಳ ಪರಿಶೀಲನೆಯ ನಂತರ ಮೂರನೇ ಹಂತದ ತನಿಖೆ ಕೈಗೊಳ್ಳುವ ಯೋಜನೆ ಅಧಿಕಾರಿಗಳದ್ದಾಗಿದೆ.

ಒಟ್ಟು, ವೋಟ್ ಚೋರಿಗೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಜನರ ಸಿಮ್‌ಕಾರ್ಡ್‌ಗಳನ್ನು ಬಳಸಿ, ಪ್ರತಿಯೊಬ್ಬರ ಹೆಸರಿನಲ್ಲಿ ಅನೇಕ ಮತಗಳನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಒಂದು ಮತವನ್ನು ಅಳಿಸಲು 80 ರೂ. ಪಾವತಿಯೂ ನಡೆದಿದೆ ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿದೆ. ಈ ಪ್ರಕರಣದ ಹಿಂದೆ ಇರುವ ನಿಜವಾದ ಕೈಗಳು ಯಾವ್ಯಾವು ಎಂಬುದು ಮುಂದಿನ ಹಂತದಲ್ಲಿ ಮಾತ್ರ ಸ್ಪಷ್ಟವಾಗಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss