Political News: ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದಿಂದ ವಾರ್ತಾ ಇಲಾಖೆ ದುರುಪಯೋಗವಾಗಿದೆ ಎಂದು ಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿರುವ ಸರ್ಕಾರದ ಅಧಿಕೃತ ಖಾತೆಯಿಂದ ವಾರ್ತಾ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಸಿಎಂ ಹೆಸರಿನ ಖಾತೆಯಿಂದ ರಾಜ್ಯಪಾಲರು, ಪ್ರಧಾನಿ, ಬಿಜೆಪಿ ವಿರುದ್ಧ ಟೀಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪರ ಈ ಖಾತೆ ಕೆಲಸ ಮಾಡುವಂತೆ ಕಾಣುತ್ತಿದೆ. ಈ ಮೂಲಕ ವಾರ್ತಾ ಇಲಾಖೆಯನ್ನು ಕಾಂಗ್ರೆಸ್‌ನವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಸಿಎಂ ಹೆಸರಿನ ಖಾತೆಯನ್ನು ವಾರ್ತಾ ಇಲಾಖೆಯವರು ಬಳಸಿಕೊಳ್ಳುತ್ತಿದ್ದಾರೋ, ಅಥವಾ ಕಾಂಗ್ರೆಸ್ ನಾಯಕರು ಬಳಸುತ್ತಿದ್ದಾರೋ ಗೊತ್ತಿಲ್ಲ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಆರೋಪ ಕೇಳಿ ಬರುತ್ತಿದ್ದು, ನೀವು ಯಡಿಯೂರಪ್ಪನವರು, ರಾಮಕೃಷ್ಣ ಹೆಗಡೆಯವರ ರೀತಿ ಇದ್ದಿದ್ದರೆ, ಜನ ನಿಮ್ಮನ್ನು ಮೆಚ್ಚುತ್ತಿದ್ದರು. ಅವರಿಬ್ಬರು ತಮ್ಮ ಮೇಲೆ ಆರೋಪ ಬಂದಾಗ, ರಾಜೀನಾಮೆ ನೀಡಿ, ಆರೋಪಮುಕ್ತರಾದ ಬಳಿಕ, ಮತ್ತೆ ಸಿಎಂ ಆಗಿದ್ದರು. ನೀವೂ ಕೂಡ ಅದೇ ರೀತಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ದೊಡ್ಡವರಾಗುತ್ತಿದ್ದಿರಿ ಎಂದು ರವಿ ಹೇಳಿದ್ದಾರೆ.




