ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಹಾಲಿ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರಿಗೂ ಈ ವಿಚಾರ ಕಾಡತೊಡಗಿದೆ.
ಇತ್ತೀಚೆಗೆ ಎಐಸಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅರುಣ್ ಪಾಟೀಲ್ ಹೆಸರು ಉಲ್ಲೇಖವಾಗಿದ್ದರಿಂದ ಸಂಶಯ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ರಾಜು ಕಾಗೆ ಅವರು ವಿಧಾನ್‌ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಿದರು. ಸಿಎಂ, ನಿಮ್ಮನ್ನೇ ನಿಗಮದ ಅಧ್ಯಕ್ಷರಾಗಿ ಮುಂದುವರಿಸುತ್ತಿದ್ದೇವೆ, ಪಟ್ಟಿ ಹೊರಬಂದಿದ್ದು ಕೇವಲ ಪ್ರಿಂಟ್ ಮಿಸ್ಟೇಕ್. ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಆದರೆ, ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆ ನೀಡಿದ್ದ ಕಾರಣದಿಂದಲೇ ರಾಜು ಕಾಗೆ ಅವರನ್ನು ಗೇಟ್‌ಪಾಸ್ ನೀಡಲಾಗಿದೆ. ತೆರವಾದ ಹುದ್ದೆಗೆ ಅರುಣ್ ಪಾಟೀಲ್ ನೇಮಕಕ್ಕೆ ಹೈಕಮಾಂಡ್ ನಿರ್ಧರಿಸಿದೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಕಳುಹಿಸಿದ ಪಟ್ಟಿಯೇ ಗೊಂದಲಕ್ಕೆ ಮೂಲ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಿಹಾರದಲ್ಲಿ ನಡೆದ CWC ಸಭೆಗೆ ತೆರಳಿರುವ ಸಮಯದಲ್ಲೇ ಎಐಸಿಸಿ ಒಟ್ಟು 39 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಅರುಣ್ ಪಾಟೀಲ್ ಹೆಸರು ಪ್ರಕಟವಾದುದು ರಾಜಕೀಯ ಕುತೂಹಲ ಕೆರಳಿಸಿದೆ. ಹೀಗಾಗಿ ಇದು ನಿಜಕ್ಕೂ ಪ್ರಿಂಟ್ ಮಿಸ್ಟೇಕಾ, ಅಥವಾ AICC ಉದ್ದೇಶಪೂರ್ವಕವಾಗಿ ಹೊಸ ಹೆಸರು ಪ್ರಕಟಿಸಿ ನಂತರ ಹಿಂಪಡೆಯಿತ್ತಾ? ಎಂಬ ಪ್ರಶ್ನೆ ಈಗ ರಾಜು ಕಾಗೆ ಬೆಂಬಲಿಗರನ್ನು ಕಾಡುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

