‘ಅಮರ್’ ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಅಭಿಷೇಕ್ ಅಂಬರೀಷ್ ನಂತರ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಅಭಿಷೇಕ್ ತಮ್ಮ ಮೂರನೇ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಯಾವುದಪ್ಪ ಆ ಸಿನಿಮಾ ಅಂತೀರಾ ಈ ಸ್ಟೋರಿ ನೋಡಿ.
ಅಭಿಷೇಕ್ ಅಂಬರೀಷ್ ಅವರು ಲಂಡನ್ನಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಅದಾದ ನಂತರ ‘ಅಮರ್’ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಇದೀಗ ‘ಪೈಲ್ವಾನ್’ ಸಿನಿಮಾ ನಿರ್ದೇಶಕ ಕೃಷ್ಣ ಅವರ ಮುಂಬರುವ ಸಿನಿಮಾದಲ್ಲಿ ಮರಿ ಅಂಬರೀಷ್ ನಟಿಸಲಿದ್ದಾರಂತೆ. ಈ ಸಿನಿಮಾದ ಟೈಟಲ್ ‘ಕಾಳಿ’ ಎಂದು ಫಿಕ್ಸ್ ಆಗಿದ್ದು, ಈ ಸಿನಿಮಾದ ಕಥೆ ಕಾವೇರಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯಲಿದೆಯಂತೆ.
ತಮ್ಮ ಸಿನಿಮಾಟೋಗ್ರಫಿಯಿಂದ ಕನ್ನಡಿಗರ ಗಮನ ಸೆಳೆದಿರುವ ಎಸ್. ಕೃಷ್ಣ ಅವರು ‘ಗಜಕೇಸರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ‘ಹೆಬ್ಬುಲಿ’, ‘ಪೈಲ್ವಾನ್’ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಇದೀಗ ಅವರ ನಾಲ್ಕನೇ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಅವರು ‘ಯಂಗ್ ರೆಬಲ್ ಸ್ಟಾರ್’ ಅಭಿಷೇಕ್ ಅಂಬರೀಶ್ ಅವರಿಗೆ ಮಾಡಲಿದ್ದಾರೆ ಎಂದು ಖಚಿತವಾಗಿದೆ.
ಇನ್ನು ಈ ಸಿನಿಮಾದ ಬಗ್ಗೆ ಕೃಷ್ಣ ಅವರು ಮಾಹಿತಿ ನೀಡಿದ್ದು, ‘1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ ಸುತ್ತಮುತ್ತ ನಡೆದಂತಹ ಪ್ರೇಮಕಥೆ ಇದಾಗಿದೆ. ಕಾವೇರಿ ಗಲಾಟೆ ಇಲ್ಲಿ ಹಿನ್ನೆಲೆ ಅಷ್ಟೇ. ಇದಕ್ಕೂ ನಾಯಕನಿಗಾಗಲೀ, ನಾಯಕಿಗಾಗಲೀ ನೇರ ಸಂಬಂಧವಿಲ್ಲ. ಇದರಿಂದ ಆ ಪಾತ್ರಗಳಿಗೆ ಎಷ್ಟು ತೊಂದರೆಯಾಯಿತು ಎಂಬುದನ್ನು ನಾವು ತೋರಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಅಭಿಷೇಕ್ ಅವರು ಹಳ್ಳಿ ಪಾತ್ರದಲ್ಲಿ ನಟಿಸುತ್ತಿದ್ದು, ಇವರ ಪಾತ್ರ ರೈತನ ಮಗನ ಪಾತ್ರವಾಗಿದೆಯಂತೆ. ಸದ್ಯ ಅಭಿಷೇಕ್ ಅವರು ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದ ಚಿತ್ರೀಕರಣ ಮುಗಿದ ತಕ್ಷಣ ‘ಕಾಳಿ’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ