ತುಮಕೂರಿನ ಹುಳಿಯಾರು ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕಗೊಂಡಿದ್ದು, ಪೊಲೀಸರ ಬಿಗಿ ಭದ್ರತೆಯಲ್ಲಿ ಅಧಿಕಾರ ಸ್ವೀಕರಿಸಿದ್ರು. ಈ ಹಿಂದೆ ಇದೇ ಪಟ್ಟಣ ಪಂಚಾಯಿತಿಯಲ್ಲಿ ಮಂಜುನಾಥ್ ಕೆಲಸ ಮಾಡ್ತಿದ್ರು. ಇವರ ಕಾರ್ಯವೈಖರಿ ಬಗ್ಗೆ, ಸದಸ್ಯರು – ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ರು. ಇವರ ನಡವಳಿಯಿಂದ ಪಟ್ಟಣದಲ್ಲಿ, ಅನಾವಶ್ಯಕವಾಗಿ ಗಲಭೆಗಳು ಸೃಷ್ಟಿಯಾಗಿದ್ದವು. ಕೆಲ ದಾಖಲೆಗಳು ಕೂಡ ಕಾಣೆಯಾಗಿದ್ದವು ಅಂತಾ ಆರೋಪಿಸಲಾಗಿತ್ತು. ಇದೀಗ ಮತ್ತೆ ಮಂಜುನಾಥ್‌ರನ್ನೇ ನೇಮಕ ಮಾಡಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮಂಜುನಾಥ್ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ, 9 ಸದಸ್ಯರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ರು. ಕಚೇರಿ ಪ್ರವೇಶ ದ್ವಾರದಲ್ಲೇ ಶಾಮಿಯಾನ ಹಾಕಿ, ಗೋ ಬ್ಯಾಕ್ ಮಂಜುನಾಥ್ ಘೋಷಣೆ ಕೂಗಿದ್ರು. ಈ ವೇಳೆ ಪೊಲೀಸರ ಜೊತೆಗೂ ವಾಗ್ವಾದ ನಡೆದಿದೆ. ಪರ-ವಿರೋಧ ಹೆಚ್ಚಾಗುತ್ತಿದ್ದಂತೆ, ಪೊಲೀಸರು ಬಲ ಪ್ರದರ್ಶನ ಮಾಡಬೇಕಾಯ್ತು. ಪೊಲೀಸರ ಬಿಗಿ ಭದ್ರತೆಯಲ್ಲೇ ಮಂಜುನಾಥ್ ಕಚೇರಿ ಪ್ರವೇಶಿಸಿದ್ರು.
ಇನ್ನು, ಸಹಿ ಮಾಡಲು ರಿಜಿಸ್ಟರ್ ಸಿಗದಿದ್ದಕ್ಕೆ, ಗೋಡೆಗೆ ನೇತು ಹಾಕಿದ್ದ ಬಿ.ಆರ್. ಅಂಬೇಡ್ಕರ್ ಫೋಟೋ ಪಕ್ಕವೇ, ಸಹಿ ಮಾಡಿದ್ರು. ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ಮಂಜುನಾಥ್, ನಾನು ಕಾನೂನಾತ್ಮಕವಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪಟ್ಟಣದ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆ. ಈ ಹಿಂದೆ ಏನಾದರೂ ಸಮಸ್ಯೆಗಳಾಗಿದ್ರೆ, ಕ್ಷಮೆಯಾಚನೆ ಮಾಡ್ತೀನಿ. ನ್ನನ ಅವಧಿಯಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ತೇನೆ ಅಂತಾ ಭರವಸೆ ನೀಡಿದ್ರು.
ಸದ್ಯಕ್ಕೆ ಪರಿಸ್ಥಿತಿ ತಿಳಿಗೊಂಡಿದ್ದು, ಶಾಸಕರನ್ನು ಭೇಟಿಯಾಗಿ ಮುಂದಿನ ತೀರ್ಮಾನ ಕೈಗೊಳ್ಳುವುದಗಿ ವಿರೋಧಿ ಗುಂಪು ತೀರ್ಮಾನಿಸಿದೆ.