Wednesday, December 3, 2025

Latest Posts

ದಾಳಿ ಬಳಿಕ ಅಮೆರಿಕ ಮಹತ್ವದ ಹೆಜ್ಜೆ – ಇನ್ಮುಂದೆ ಯಾರಿಗೂ ಆಶ್ರಯ ಇಲ್ಲ

- Advertisement -

ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿ ಘಟನೆಯ ನಂತರ, ಅಮೆರಿಕ ಸರ್ಕಾರದಿಂದ ಪ್ರಮುಖ ನಿರ್ಧಾರ ಪ್ರಕಟವಾಗಿದೆ. ಟ್ರಂಪ್ ಆಡಳಿತವು ಅಮೆರಿಕದ ಆಶ್ರಯ ಪ್ರಕರಣಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಇದರೊಂದಿಗೆ, ಅಫ್ಘಾನ್ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ನೀಡುವಿಕೆಯನ್ನು ಕೂಡ ನಿಲ್ಲಿಸಲಾಗಿದೆ.

ಶ್ವೇತಭವನದಿಂದ ಅಲ್ಪ ದೂರದಲ್ಲೇ ನಡೆದ ದಾಳಿಯಲ್ಲಿ, ಇಬ್ಬರು ರಾಷ್ಟ್ರೀಯ ಗಾರ್ಡ್ ಸೈನಿಕರು ಗುಂಡೇಟಿಗೆ ಗುರಿಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, 20 ವರ್ಷದ ಸಾರಾ ಬೆಕ್‌ಸ್ಟ್ರೋಮ್ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. 24 ವರ್ಷದ ಆಂಡ್ರ್ಯೂ ವುಲ್ಫ್ ಅವರ ಸ್ಥಿತಿ ಗಂಭೀರವಾಗಿದೆ. ಕೇಸಿನಲ್ಲಿ ಆರೋಪಿಯಾಗಿರುವ 29 ವರ್ಷದ ಅಫ್ಘಾನ್ ಪ್ರಜೆ ರಹಮಾನಲ್ಲಾ ಲಕನ್ವಾಲ್, 2021ರಲ್ಲಿ ಅಮೆರಿಕ ಪ್ರವೇಶಿಸಿದ್ದಾಗಿ ಮತ್ತು ಈ ವರ್ಷ ಆಶ್ರಯ ಪಡೆದಿದ್ದಾಗಿ ದಾಖಲೆಗಳು ಸೂಚಿಸುತ್ತವೆ.

ಯುಎಸ್‌ಸಿಐಎಸ್ ನಿರ್ದೇಶಕ ಜೋಸೆಫ್ ಎಡ್ಲೋ, ಎಲ್ಲಾ ಅಧಿಕಾರಿಗಳಿಗೆ ಆಶ್ರಯ ನಿರ್ಧಾರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಎಡ್ಲೋ ಹೇಳುವಂತೆ, ಅಮೆರಿಕನ್ ನಾಗರಿಕರ ಸುರಕ್ಷತೆ ಅತ್ಯಂತ ಪ್ರಮುಖ. ಸಂಪೂರ್ಣ ತನಿಖೆಯಿಲ್ಲದೆ ನಾವು ಮುಂದುವರಿಯುವುದಿಲ್ಲ. ಈ ಕ್ರಮವು ದೇಶಾದ್ಯಂತ ಭದ್ರತಾ ಚಿಂತನೆಗಳು ಗಟ್ಟಿಯಾಗುತ್ತಿರುವ ಸಮಯದಲ್ಲಿ ಹೊರಬಂದಿದೆ. ಟ್ರಂಪ್ ಆಡಳಿತದ ಪ್ರಕಾರ, ಬೈಡೆನ್ ಆಡಳಿತದ ಅವಧಿಯಲ್ಲಿ ಅನುಮೋದಿಸಲಾದ ಎಲ್ಲಾ ಆಶ್ರಯ ಪ್ರಕರಣಗಳನ್ನು ಮರುಪರಿಶೀಲಿಸಲಾಗುವುದು. ಅನೇಕ ಪ್ರಕರಣಗಳಲ್ಲಿ ಸೂಕ್ತ ಪರಿಶೀಲನೆ ಇರಲಿಲ್ಲ ಎಂಬ ಆರೋಪ ಸರ್ಕಾರದದು.

ಇದಕ್ಕೂ ಮೊದಲು, ಯುಎಸ್‌ಸಿಐಎಸ್ 19 ದೇಶಗಳ ನಾಗರಿಕರಿಂದ ಗ್ರೀನ್ ಕಾರ್ಡ್ ಅರ್ಜಿಗಳನ್ನು ಮರುಪರಿಶೀಲಿಸಲು ಪ್ರಾರಂಭಿಸಿತ್ತು. ಇದು ಜೂನ್‌ನ ಅಧ್ಯಕ್ಷೀಯ ಆದೇಶದ ನಂತರದ ಕ್ರಮವಾಗಿತ್ತು. ರಾತ್ರೋರಾತ್ರಿ ಪ್ರಕಟಿಸಿದ ತನ್ನ ಹೇಳಿಕೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಅಮೆರಿಕವು ಮೂರನೇ ವಿಶ್ವ ರಾಷ್ಟ್ರಗಳಿಂದ ವಲಸೆಗೆ ಶಾಶ್ವತ ನಿಷೇಧ ವಿಧಿಸುತ್ತಿದೆ. ಅವರ ಪ್ರಕಾರ, ದೇಶೀಯ ಶಾಂತಿಯನ್ನು ಹಾಳುಮಾಡುವ ಯಾವುದೇ ವಿದೇಶಿಯರ ಪೌರತ್ವವನ್ನು ರದ್ದುಗೊಳಿಸಬಹುದು. ಹಾಗೆಯೇ, ಪಾಶ್ಚಿಮಾತ್ಯ ನಾಗರಿಕತೆಗೆ ಅನುಗುಣವಾಗಿಲ್ಲದವರನ್ನು ನೇರವಾಗಿ ಗಡೀಪಾರು ಮಾಡುವ ಸೂಚನೆ ನೀಡಿದ್ದಾರೆ.

ಶ್ವೇತಭವನದ ಬಳಿ ನಡೆದ ದಾಳಿಯ ನಂತರ, ಅಮೆರಿಕದ ವಲಸೆ ನೀತಿಗಳು ವೇಗವಾಗಿ ಕಠಿಣವಾಗುತ್ತಿರುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೆಲ್ಲ ಪರಿಣಾಮ ಬೀರುತ್ತವೆ ಎನ್ನುವುದನ್ನು ಗಮನಿಸಬೇಕಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss