ನವೆಂಬರ್ ಕ್ರಾಂತಿಯ ಕಿಚ್ಚಿನ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಂದು ಐತಿಹಾಸಿಕ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ, ಸಿಎಂ ಆಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ದೇವರಾಜ ಅರಸು ಅವರ ದಾಖಲೆಯನ್ನು, ಸಿದ್ದರಾಮಯ್ಯ ಮುರಿಯಲಿದ್ದಾರೆ. ಆದರೆ, ಇದು ಸಾಕಾರಗೊಳ್ಳಬೇಕಾದರೆ ಸಿದ್ದರಾಮಯ್ಯ ಅವರು, ಜನವರಿವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕು. ಅಧಿಕಾರ ಹಂಚಿಕೆ ಊಹಾಪೋಹಗಳು ನಿಜವಾಗದೇ ಇದ್ದಲ್ಲಿ, ಸಿದ್ದರಾಮಯ್ಯ ದಾಖಲೆ ಬರೆಯುವುದು ಖಚಿತವಾಗಿದೆ.
ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿದ್ದರು. ಅವರು 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಮತ್ತು ಬಳಿಕ 1978ರ ಫೆಬ್ರವರಿ 28ರಿಂದ 1980ರ ಜನವರಿ 7ರವರೆಗೆ ಎರಡು ಅವಧಿಗಳಲ್ಲಿ ಸಿಎಂ ಆಗಿದ್ದರು.
ಸಿದ್ದರಾಮಯ್ಯ ಕೂಡ 2ನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದು, 2026ರ ಜನವರಿ 5ರ ವೇಳೆಗೆ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ. ನವೆಂಬರ್ ಕ್ರಾಂತಿ ಹಿನ್ನೆಲೆ ಕಾಂಗ್ರೆಸ್‌ನೊಳಗೆ ನಾಯಕತ್ವ ಬದಲಾವಣೆ ಆಗದಿದ್ದರೆ, ಕರ್ನಾಟಕದ ಇತಿಹಾಸದಲ್ಲಿ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಕೀರ್ತಿ ಸಿದ್ದರಾಮಯ್ಯ ಅವರದ್ದಾಗಲಿದೆ.
ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನದಲ್ಲಿ ಅಧಿಕಾರ ಮುಗಿಸಿದ ಸಿದ್ದರಾಮಯ್ಯ, ಇದೀಗ 2ನೇ ಬಾರಿಗೆ ಅದೇ ಹಾದಿಯಲ್ಲಿ ನಡೆದು ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ. ದೇವರಾಜ ಅರಸು ಅವರಿಗೆ ಅವರೇ ಸಾಟಿ ಎಂದು ಹೇಳಿಕೊಂಡಿದ್ದ ಸಿಎಂ ಸಿದ್ದರಾಮಯ್ಯ, ಅರಸು ಅವರ ದಾಖಲೆಯನ್ನೇ ಸರಿಗಟ್ಟಲು ಕೌಂಟ್‌ಡೌನ್ ಆರಂಭವಾಗಿದೆ.




