ಕುರ್ಚಿ ಗುದ್ದಾಟದ ಮಧ್ಯೆ ಸಿದ್ದು‘ನಾಟಿ ಕೋಳಿ ಉತ್ಸವ’

ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಪಾತ್ರರಾಗಲಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿ ಬಳಗ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ‘ನಾಯಕತ್ವ ಬದಲಾವಣೆ’ ಕುರಿತ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಈ ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಆಗುವ ಸಾಧ್ಯತೆ ಇದೆ.

ದಿವಂಗತ ದೇವರಾಜ ಅರಸು ಅವರು 2794 ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ 5 ವರ್ಷ 4 ದಿನ ಹಾಗೂ ಎರಡನೇ ಅವಧಿಯಲ್ಲಿ 2 ವರ್ಷ 8 ತಿಂಗಳು ಪೂರ್ಣಗೊಳಿಸಿದ್ದು, ಜ.6ರಂದು ಒಟ್ಟು 2795 ದಿನಗಳನ್ನು ಪೂರೈಸಲಿದ್ದಾರೆ. ಈ ಮೂಲಕ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಸರಣಿ ಸಭೆ, ಸಮಾವೇಶ, ರಕ್ತದಾನ ಶಿಬಿರ, ಪೂಜೆ–ಪುನಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಕೆಲ ಕಾರ್ಯಕ್ರಮಗಳಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಜ.5ರಂದು ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿರುವ ರಾಜ್ಯ ಕುಂಬಾರರ ಮಹಾಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಈ ಮಹಾಸಮ್ಮೇಳನವನ್ನು ಮೈಸೂರು ಜಿಲ್ಲಾ ಕುಂಬಾರರ ಸಂಘ ಆಯೋಜಿಸಿದೆ. ಜ.6ರಂದು ನೆಲಮಂಗಲ ಸಮೀಪ ಸಿಎಂ ಅಭಿಮಾನಿಗಳಿಂದ ‘ನಾಟಿ ಕೋಳಿ ಉತ್ಸವ’ ಆಯೋಜಿಸಲಾಗಿದ್ದು, ಇದೇ ದಿನ ಮೈಸೂರಿನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ರಕ್ತದಾನ ಶಿಬಿರ ನಡೆಯಲಿದೆ.

ಇನ್ನು ಫೆ.13ರಂದು ದಾವಣಗೆರೆಯಲ್ಲಿ ಸರ್ಕಾರದ ವತಿಯಿಂದ ‘ಸಹಸ್ರ ದಿನಾಚರಣೆ’ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ದಿನ 1000 ದಿನಗಳು ಪೂರೈಸಲಿವೆ. ಈ ಸಂದರ್ಭದಲ್ಲಿ ಹಟ್ಟಿ, ತಾಂಡಾ ಹಾಗೂ ಕಾಲೋನಿಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಕಂದಾಯ ಗ್ರಾಮಗಳ ಮಾನ್ಯತೆ ನೀಡುವ ಕಾರ್ಯಕ್ರಮಗಳು ನಡೆಯಲಿವೆ.

ವರದಿ : ಲಾವಣ್ಯ ಅನಿಗೋಳ

About The Author