Tuesday, July 22, 2025

Latest Posts

ಸುರ್ಜೇವಾಲಾ ಹಫ್ತಾ ವಸೂಲಿಗೆ ಬರ್ತಾರೆ, ಬಣಗಳನ್ನು ಎತ್ತಿ ಕಟ್ತಾರೆ : ಕೈ ಉಸ್ತುವಾರಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

- Advertisement -

ಬೆಂಗಳೂರು : ಪವರ್ ಶೇರಿಂಗ್ ವಿಚಾರದ ನಡುವೆಯೇ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಸಚಿವರ ಕಾರ್ಯವೈಖರಿ ಹಾಗೂ ಶಾಸಕರ ಅಹವಾಲು, ದೂರುಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೈ ಉಸ್ತುವಾರಿಯ ವಿರುದ್ಧ ಬಿಜೆಪಿ ಮೇಲಿಂದ ಮೇಲೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಈ ನಡುವೆಯೇ ಬಿಜೆಪಿ ನಾಯಕರೊಬ್ಬರು ಸುರ್ಜೆವಾಲಾ ವಸೂಲಿಗೆ ರಾಜ್ಯಕ್ಕೆ ಬರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. 80 ಪರ್ಸೆಂಟ್ ಭ್ರಷ್ಟಾಚಾರ ಇಲ್ಲಿ ತಾಂಡವವಾಡುತ್ತಿದೆ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್​​ಗೆ ಸಂಪದ್ಬರಿತ ರಾಜ್ಯವಾಗಿದೆ. ಹೀಗಾಗಿ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಲ್ಲಿ ಹಫ್ರಾ ವಸೂಲಿ ಮಾಡಲು ಬರುತ್ತಾರೆ ಎಂದು ಮಾಜಿ ಸಚಿವ ಎಂ.ಪಿ,ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಇವರು ಬಂದಾಗೊಮ್ಮೆ ತಮ್ಮನ್ನು ಭೇಟಿಯಾಗುವಂತೆ ಶಾಸಕರಿಗೆ ಹೇಳ್ತಾರೆ, ಅದಾದ ಬಳಿಕ ನೀವು ನನ್ನ ಮೀಟ್ ಮಾಡಬೇಕೆಂದು ಮಂತ್ರಿಗಳಿಗೆ ತಿಳಿಸುತ್ತಾರೆ. ಮತ್ತೊಮ್ಮೆ ಸಿಎಂ ಹಾಗೂ ಡಿಸಿಎಂ ಅವರೂ ಭೇಟಿಯಾಗುವುದಂತೆ. ಆದರೆ ಇಲ್ಲಿ ಅಸಲಿಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟುತ್ತಿರುವುದೇ ಈ ರಣದೀಪ್ ಸಿಂಗ್ ಸುರ್ಜೇವಾಲಾ ಎಂದು ಆಪಾದನೆ ಮಾಡಿದ್ದಾರೆ.

ಉಸ್ತುವಾರಿಯಾದವರೂ ಪಕ್ಷದ ಆಂತರಿಕ ಕಚ್ಚಾಟಗಳನ್ನು ಸರಿ ಪಡಿಸುವುದು ಸುರ್ಜೇವಾಲಾ ಅವರ ಕೆಲಸ. ಆದರೆ, ಅವರು ಇಲ್ಲಿಗೆ ಬರಲು ಶುರುಮಾಡಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಬೀದಿ ಜಗಳ ನಡೆಯುತ್ತಿದೆ. ಇದೇ ರೀತಿ ಕಾಂಗ್ರೆಸ್ಸಿನ ಭಿನ್ನಮತ ಮುಂದುವರಿದರೆ ಚಾಕು, ಚೂರಿ ಇಟ್ಕೊಂಡು ಓಡಾಡುವಂತಹ ಪರಿಸ್ಥಿತಿ ಬರಬಹುದು ಎಂದು ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. ಪಕ್ಷದಲ್ಲಿ ಬಣಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು, ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಕೈ ಉಸ್ತುವಾರಿ ವಿರುದ್ಧ ಮಾಜಿ ಸಚಿವ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕು. ಆದರೆ, ಕಾಂಗ್ರೆಸ್ ಪಕ್ಷದವರ ಆಂತರಿಕ ಕಚ್ಚಾಟದಿಂದಾಗಿ ಅದಕ್ಕಿಂತ ಮುನ್ನವೇ ಸರ್ಕಾರ ಪತನಗೊಳ್ಳಲಿದೆ. ತಿಂಗಳಿಗೆ ಮೂರ್ನಾಲ್ಕು ಬಾರಿ ಸುರ್ಜೇವಾಲ ಬರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಬರುವುದು ಹಫ್ತಾ ವಸೂಲಿ ಮಾಡುವುದಕ್ಕೆಯೇ ಹೊರತು ಇದರಲ್ಲಿ ಇನ್ನೇನು ವಿಶೇಷವಿಲ್ಲ. ಒಂದು ಸಲ ಒಂದು ಬಣವನ್ನು ಎತ್ತಿ ಕಟ್ಟುತ್ತಾರೆ, ಇನ್ನೊಂದು ಬಾರಿ ಇನ್ನೊಂದು ಬಣವನ್ನು ಎತ್ತಿಕಟ್ಟಿ, ಹಫ್ತಾ ವಸೂಲಿ ಮಾಡಿಕೊಂಡು ಹೋಗುತ್ತಾರೆ ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ವಿಚಾರಗಳ ಬಗ್ಗೆ ಕೈ ನಾಯಕರೇ ಮಾತನಾಡುವುದು ಸಾಮಾನ್ಯ ಆದರೆ ಬಿಜೆಪಿ ನಾಯಕ ಮಾತನಾಡಿರುವುದು ಎಲ್ಲರ ಗಮನ ಸೆಳೆಯುವಂತಾಗಿದೆ.

- Advertisement -

Latest Posts

Don't Miss