Friday, October 18, 2024

Latest Posts

ಕ್ರಿಮಿನಲ್ಸ್​​ಗಳಿಗೆ ಅಮಿತ್ ಶಾ ಬಿಗ್ ಶಾಕ್! ; ಬ್ರಿಟಿಷರ ಕಾನೂನುಗಳಿಗೆ ಗುಡ್​ಬೈ!

- Advertisement -

ಯಾವುದೇ ಕಾನೂನು ಇರದೇ ಒಂದು ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದು ಎಂದರೇ ಅದನ್ನು ಊಹಿಸಿಕೊಳ್ಳೋದು ಕಷ್ಟ. ಮಾನವ ಸಮಾಜಕ್ಕೆ ಕಾನೂನು ಅತ್ಯವಶ್ಯಕ. ನಿರಂತರ ಸಂಘರ್ಷದಿಂದ ತುಂಬಿದ ಸಮಾಜದಲ್ಲಿ ಕಾನೂನು ಮಾನವನ ನಡವಳಿಕೆ, ವರ್ತನೆ ಕುರಿತು ಮಾರ್ಗದರ್ಶನ ನೀಡುತ್ತದೆ. ಕೇವಲ ಅಪರಾಧಗಳನ್ನು ತಡೆಯುವುದಲ್ಲದೇ ನ್ಯಾಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಸಮ. ಎಲ್ಲರಿಗೂ ಒಂದೇ ನ್ಯಾಯ. ಸಮಾಜದ ರಕ್ಷಣೆ ಜತೆಗೆ ಮಾನವನ ವಿಕಸನಕ್ಕೂ ಕಾನೂನುಗಳು ಪೂರಕ.
ಭಾರತ ಬ್ರಿಟಿಷರ ವಶದಲ್ಲಿದ್ದ ಸಮಯ, 1862ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿತ್ತು. ಈ ಕಾನೂನಿನ್ವಯ ವಿವಿಧ ಅಪರಾಧಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತಿತ್ತು. ಐಪಿಸಿಯಲ್ಲಿ ಹಲವು ದೋಷಗಳಿದ್ದ ಕಾರಣ ಅದನ್ನು ಬದಲಾಯಿಸಿ 3 ಹೊಸ ಅಪರಾಧ ಕಾನೂನುಗಳನ್ನು ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಜುಲೈ 1 ರಿಂದ ಹೊಸ ಯುಗಾರಂಭವಾಗಿದೆ. ಹೊಸ ಕ್ರಿಮಿನಲ್ ಕಾನೂನುಗಳಾದ ‘ಭಾರತೀಯ ನ್ಯಾಯ ಸಂಹಿತಾ'(ಬಿಎನ್‍ಎಸ್), ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ'(ಬಿಎನ್‍ಎಸ್‍ಎಸ್) ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ'(ಬಿಎಸ್‍ಎ) 2024ನೇ ಜುಲೈ 1ರ ಸೋಮವಾರದಿಂದ ದೇಶಾದ್ಯಂತ ಜಾರಿಗೆ ಬಂದಿವೆ.

 

ಈ ಮೂರು ಕಾನೂನುಗಳು ‘ಇಂಡಿಯನ್ ಪೀನಲ್ ಕೋಡ್’ ಅಂದರೆ ಐಪಿಸಿ, ‘ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಂದರೆ ಸಿಆರ್​ಪಿಸಿ ಮತ್ತು ‘ಎವಿಡೆನ್ಸ್ ಆಕ್ಟ್’ಗಳ ಜಾಗವನ್ನು ತುಂಬಲಿವೆ. ದೇಶದ ಯಾವುದೇ ಮೂಲೆಯಲ್ಲೂ ದೂರು ನೀಡುವ ಕ್ರಮವಾದ ‘ಝೀರೋ ಎಫ್‍ಐಆರ್’, ಆನ್‍ಲೈನ್ ಮಾಧ್ಯಮದ ಮೂಲಕವೂ ಪೊಲೀಸರಿಗೆ ದೂರು ನೀಡುವ ಸೌಲಭ್ಯ, ‘ಎಸ್‍ಎಂಎಸ್’ನಂಥ ಡಿಜಿಟಲ್ ಮಾಧ್ಯಮದ ಮೂಲಕವೂ ಸಮನ್ಸ್ ನೀಡುವ ವ್ಯವಸ್ಥೆ ಸೇರಿದಂತೆ ಈ ಮೂರು ಕಾನೂನುಗಳು ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿವೆ.
ಹಳೆಯ ಕಾನೂನುಗಳು ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದವು. ಆದರೆ ಮೂರು ಹೊಸ ಪ್ರಮುಖ ಕಾನೂನುಗಳ ಉದ್ದೇಶ ಶಿಕ್ಷೆ ನೀಡುವುದಲ್ಲ. ಬದಲಿಗೆ ನ್ಯಾಯ ಒದಗಿಸುವುದಾಗಿದೆ. ಮೊದಲ ಬಾರಿಗೆ, ಭಾರತೀಯತೆಯ ಅಸ್ಮಿತೆಯೊಂದಿಗೆ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳ ಮೂಲಕ, ನಮ್ಮದೇ ಆದ ಅಪರಾಧ ನ್ಯಾಯ ವ್ಯವಸ್ಥೆಯು ಭಾರತದಿಂದ, ಭಾರತಕ್ಕಾಗಿ ಮತ್ತು ಭಾರತೀಯ ಸಂಸತ್ತಿನಿಂದ ರಚಿಸಲ್ಪಟ್ಟ ವ್ಯವಸ್ಥೆಯಿಂದ ನಡೆಸಲ್ಪಡುತ್ತದೆ.

ಹೊಸ ಕಾನೂನು ಎನಿತ್ತು ?
ಭಾರತೀಯ ದಂಡ ಸಂಹಿತೆ (ಐಪಿಸಿ)- ಭಾರತೀಯ ನ್ಯಾಯ ಸಂಹಿತೆ(ಬಿಎನ್‍ಎಸ್)
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ)- ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‍ಎಸ್‍ಎಸ್)
ಭಾರತೀಯ ಸಾಕ್ಷ್ಯ ಕಾಯಿದೆ- ಭಾರತೀಯ ಸಾಕ್ಷಿ ಅಧಿನಿಯಮ(ಬಿಎಸ್‍ಎ)

ಇನ್ನು ಹೊಸ ಕಾನೂನಿನ ವಿಚಾರಕ್ಕೆ ಬಂದ್ರೆ.. ಭಾರತೀಯ ದಂಡ ಸಂಹಿತೆ ಬದಲಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯು ಹಿಂದಿನ 511 ಸೆಕ್ಷನ್‍ಗಳ ಬದಲಿಗೆ 358 ಸೆಕ್ಷನ್‍ಗಳನ್ನು ಹೊಂದಿದೆ. ಇಲ್ಲೂ175 ಸೆಕ್ಷನ್‍ಗಳನ್ನು ಬದಲಿಸಿ, 8 ಹೊಸ ಸೆಕ್ಷನ್‍ಗಳನ್ನು ಸೇರಿಸಿ, 22 ಸೆಕ್ಷನ್‍ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈಗ 513 ಸೆಕ್ಷನ್‍ಗಳನ್ನು ಹೊಂದಿದ್ದು, ಹಳೆಯ ಕಾನೂನಿನ 160 ಸೆಕ್ಷನ್‍ಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ 9 ಹೊಸ ಸೆಕ್ಷನ್ ಸೇರ್ಪಡೆ, 9 ಸೆಕ್ಷನ್‍ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷಿ ಸಂಹಿತೆ ಹಿಂದಿನ 167ರ ಬದಲಿಗೆ 170 ವಿಭಾಗಗಳನ್ನು ಹೊಂದಿರುತ್ತದೆ. 23 ವಿಭಾಗಗಳನ್ನು ಬದಲಾಯಿಸಲಾಗಿದೆ. ಒಂದು ಹೊಸ ವಿಭಾಗ ಸೇರಿಸಲಾಗಿದೆ ಮತ್ತು 5 ವಿಭಾಗಗಳನ್ನು ರದ್ದುಗೊಳಿಸಲಾಗಿದೆ.

ಹೊಸ ಕಾನೂನುಗಳ ಅನುಷ್ಠಾನದ ನಂತರ, ಎಫ್‍ಐಆರ್​ನಿಂದ ನ್ಯಾಯಾಲಯದ ತೀರ್ಪಿನವರೆಗೆ, ಸಂಪೂರ್ಣ ಪ್ರಕ್ರಿಯೆಯು ಆನ್‍ಲೈನ್ ಆಗಿರುತ್ತದೆ. ಮತ್ತು ಭಾರತವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿಆಧುನಿಕ ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವ ದೇಶವಾಗಲಿದೆ. ಈ ಕಾನೂನುಗಳು ತಾರೀಖ್-ಪೆ-ತಾರೀಖ್ (ಪದೇಪದೆ ವಿಚಾರಣೆ ಮುಂದೂಡುವುದು) ಪ್ರವೃತ್ತಿಗೆ ಅಂತ್ಯ ಹಾಡುವ ಜತೆಗೆ ಮೂರು ವರ್ಷಗಳಲ್ಲಿ ನ್ಯಾಯವನ್ನು ನೀಡುವ ನ್ಯಾಯಾಂಗ ವ್ಯವಸ್ಥೆ ಖಾತ್ರಿಪಡಿಸುತ್ತದೆ.

ವಸಾಹತು ಶಾಹಿ ಕಾನೂನುಗಳನ್ನು ಕೊನೆಗೊಳಿಸಲೆಂದು ಭಾರತೀಯರೇ ಭಾರತೀಯರಿಗಾಗಿ ಭಾರತೀಯ ಸಂಸತ್ ರೂಪಿಸಿದ ಮೂರು ಕಾನೂನುಗಳಿವು. ನಾವು ಕೇವಲ ಕಾನೂನುಗಳ ಹೆಸರು ಬದಲಾಯಿಸಿಲ್ಲ. ಇವುಗಳ ಸ್ವರೂಪ, ಅವುಗಳ ಆತ್ಮ ಮತ್ತು ಚೈತನ್ಯವೂ ಭಾರತೀಯವೇ ಆಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

- Advertisement -

Latest Posts

Don't Miss