ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ಇದೀಗ ನೆರೆಯ ಆಂಧ್ರಪ್ರದೇಶ ಸಿಎಂ ತಂತ್ರವನ್ನು ಅನುಸರಿಸಲು ಹೊರಟಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ಡಿಸಿಎಂಗಳನ್ನು ನೇಮಕ ಮಾಡೋ ಮೂಲಕ ಜಗನ್ ದಾಖಲೆ ಬರೆದಿದ್ರು. ಇದೀಗ ರಾಜ್ಯದಲ್ಲೂ ಸಹ ನಾಲ್ವರು ಡಿಸಿಎಂಗಳನ್ನು ನೇಮಕ ಮಾಡಲು ಬಿಜೆಪಿ ಮುಂದಾಗಿದೆ ಅಂತ ತಿಳಿದುಬಂದಿದೆ.
ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ಬಿಜೆಪಿ ಪಾಳಯದಲ್ಲಿ ಸಕಲ ಸಿದ್ಧತೆ ನಡೆದಿದೆ. ಇನ್ನು ಬಿಜೆಪಿ ಮುಖಂಡರು ಪಕ್ಷದ ವರಿಷ್ಠರೊಂದಿಗೆ ದೆಹಲಿಗೆ ತೆರಳಿದ್ದು, ಸರ್ಕಾರ ರಚನೆ ಕುರಿತು ಎಚ್ಚರಿಕೆಯಿಂದ ಹೆಜ್ಜೆಯಿಡುವಂತೆ ನಾಯಕರು ಸೂಚಿಸಿದ್ದಾರೆ. ಹೀಗಾಗಿ ನಿನ್ನೆಯಷ್ಟೇ ಪತನವಾಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಇಲ್ಲೂ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿವೆ.
ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾಗಲಿರೋ ಸರ್ಕಾರದಲ್ಲಿ ಬಿಎಸ್ವೈ ಸಿಎಂ ಆಗಿ ಅಧಿಕಾರವಹಿಸಿಕೊಂಡ್ರೆ, ನಾಲ್ವರನ್ನು ಡಿಸಿಎಂಗಳನ್ನಾಗಿ ನೇಮಕ ಮಾಡೋದಕ್ಕೆ ಬಿಜೆಪಿ ವರಿಷ್ಠರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ನೆರೆಯ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಹಾದಿ ಹಿಡಯಲು ಬಿಜೆಪಿ ಹೊರಟಿದೆ ಎನ್ನಲಾಗಿದೆ. ಎಸ್ಸಿ,ಎಸ್ಟಿ ಮೈನಾರಿಟಿ, ಹಿಂದುಳಿದ ವರ್ಗ, ಮೈನಾರಿಟಿ ವರ್ಗಗಳಿಗೆ ಪ್ರತ್ಯೇಕವಾಗಿ ಡಿಸಿಎಂ ಹುದ್ದೆ ಕಲ್ಪಿಸುವ ಮೂಲಕ ಜಗನ್ ಈ ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡಬಾರದೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದರು.
ಇನ್ನು ರಾಜ್ಯದಲ್ಲೂ ಕೂಡ ನಾಲ್ಕು ಡಿಸಿಎಂಗಳಿಗೆ ಜಾತಿವಾರು ಅವಕಾಶ ನೀಡಲು ಮುಂದಾಗಿದ್ದು, ಲಿಂಗಾಯತ ಸಮಾಜದಿಂದ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾಯಕ ಸಮುದಾಯದಿಂದ ಬಿ. ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿ, ಕುರುಬ ಸಮುದಾಯದಿಂದ ಎಚ್.ವಿಶ್ವನಾಥ್ ಅಥವಾ ಈಶ್ವರಪ್ಪ, ಒಕ್ಕಲಿಗ ಸಮುದಾಯದಿಂದ ಸಿ.ಟಿ ರವಿ ಅಥವಾ ಆರ್.ಅಶೋಕ್ ಮತ್ತು ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿಯವರಿಗೆ ಮಣೆ ಹಾಕಲು ಬಿಜೆಪಿ ವರಿಷ್ಠರು ಸ್ಕೆಚ್ ಹಾಕಿದ್ದಾರೆ.