ಅಮೃತಧಾರೆ ಸೀರಿಯಲ್‌ ನಟಿಗೆ ಚಿತ್ರಹಿಂಸೆ : ಸಿಕ್ಕ ಸಿಕ್ಕ ಕಡೆ ಕಿರುತರೆ ನಟಿಗೆ ಚಾಕು ಇರಿದ ಪತಿ

ಅಮೃತಧಾರೆ ಸೀರಿಯಲ್‌ ನಟಿ ಶ್ರುತಿ ಅಲಿಯಾಸ್‌ ಮಂಜುಳ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದಿರೋದು ಬೇರೆ ಯಾರೂ ಅಲ್ಲ ಸ್ವಂತ ಪತಿ ಅಮರೇಶ್. ಅಸಲಿಗೆ, ಈ ಘಟನೆ ನಡೆದಿರೋದು ಜುಲೈ 4 ರಂದು. ಆದರೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಮಂಜುಳ ಅಲಿಯಾಸ್‌ ಶ್ರುತಿ 20 ವರ್ಷಗಳ ಹಿಂದೆ ಅಮರೇಶ್‌ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದರು. ಬೆಂಗಳೂರಿನ ಹನುಮಂತನಗರದಲ್ಲಿ ಮನೆಯನ್ನ ಲೀಸ್‌ಗೆ ಪಡೆದು ಮಂಜುಳ ಕುಟುಂಬ ವಾಸವಿತ್ತು. ಆದರೆ, ಮಂಜುಳರ ನಡವಳಿಕೆ ಪತಿ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ದಂಪತಿ ನಡುವೆ ಹೊಂದಾಣಿಕೆ ಸರಿ ಇರಲಿಲ್ಲ. ಹೀಗಾಗಿ, ಗಂಡನಿಂದ ದೂರಾಗಿ ಅಣ್ಣನ ಮನೆಯಲ್ಲಿ ಮಂಜುಳ ವಾಸವಿದ್ದರು.

ಜುಲೈ 4 ಅಂದರೆ ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ತೆರಳಿದ್ಮೇಲೆ ಹೆಂಡತಿ ಮಂಜುಳ ಮೇಲೆ ಪತಿ ಅಮರೇಶ್ ಹಲ್ಲೆ ನಡೆಸಿದ್ದಾರೆ. ಇನ್ನು ಮುನೇಶ್ವರ ಲೇಔಟ್‌ನಲ್ಲಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು, ಕ್ರೂರವಾಗಿ ಪಕ್ಕೆಲುಬು ತೊಡೆ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಪಾಪಿ ಗಂಡ ಜುಟ್ಟು ಹಿಡಿದು ಗೋಡೆಗೆ ತಲೆಗುದ್ದಿಸಿದ್ದಾರೆ. ಸದ್ಯ ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಮಾಡಿರೋದಾಗಿ ಶ್ರುತಿ ಅಲಿಯಾಸ್ ಮಂಜುಳ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಮರೇಶ್‌ನ ಬಂಧಿಸಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಜುಳ ಅಲಿಯಾಸ್ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author