ಪರಪ್ಪನ ಅಗ್ರಹಾರ ಜೈಲಿನಲ್ಲಿನ ಕೈದಿಗಳ ಕುರಿತು ಹಲವು ಆರೋಪಗಳು ಕೇಳಿಬಂದಿವೆ. ಕೈದಿಗಳ ಡ್ಯಾನ್ಸ್ ವೀಡಿಯೋ ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆ, ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳ ಕುರಿತು ಎಚ್ಚೆತ್ತ ಗೃಹ ಇಲಾಖೆ ಆಂತರಿಕ ತನಿಖೆಗೆ ಮುಂದಾಗಿದೆ. ಬಂಧಿತರ ವೈರಲ್ ಆದ ಡ್ಯಾನ್ಸ್ ವಿಡಿಯೋಗೆ ಸಂಬಂಧ ಪಟ್ಟಂತೆಯೂ ಎಫ್ಐಆರ್ ದಾಖಲಾಗಿದೆ.
ಮೊಬೈಲ್ ಫೋನ್ ಬಳಸಿದ್ದ ಆರೋಪದ ಹಿನ್ನೆಲೆ ಕೈದಿಗಳಾದ ತರುಣ್ ಕೊಂಡೂರು, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ ಹಾಗೂ ಜುಹಾದ್ ಹಮೀದ್ ಶಕೀಲ್‌ರನ್ನು ಜೈಲು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಮೊಬೈಲ್ ಬಳಕೆ ಹಾಗೂ ಜೈಲಿನೊಳಗಿನ ಬಿಂದಾಸ್ ಜೀವನಶೈಲಿ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಕುರಿತು ಆಂತರಿಕ ತನಿಖೆ ಮುಂದುವರಿಸಲಾಗಿದ್ದು, ವರದಿ ಶೀಘ್ರದಲ್ಲೇ ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಲಿದೆ.
ಕಾರಾಗೃಹದಲ್ಲಿ ಬಂಧಿತರ ಡ್ಯಾನ್ಸ್ ವಿಡಿಯೋ ವೈರಲ್ ಹಿನ್ನೆಲೆ, ನಾಲ್ವರು ವಿಚಾರಣಾಧೀನ ಬಂಧಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಮತ್ತು ಚರಣ್ ರಾವ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾರಕ್ 8ರ ಕೊಠಡಿ ಸಂಖ್ಯೆ 7ರಲ್ಲಿ ನಡೆದ ಡ್ಯಾನ್ಸ್‌ನಲ್ಲಿ, ನಿಷೇಧಿತ ವಸ್ತುಗಳ ಬಳಕೆ ಆರೋಪ ಕೇಳಿ ಬಂದಿತ್ತು. ಈ ಘಟನೆ 2018ರಿಂದ 2025ರ ಅವಧಿಯಲ್ಲಿ ನಡೆದಿದ್ದು, ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದವರು ಹಾಗೂ ಚಿತ್ರೀಕರಣವನ್ನು ಹಂಚಿದವರ ಕುರಿತು ತನಿಖೆ ಆರಂಭವಾಗಿದೆ. ಬಿಎನ್ಎಸ್ ಸೆಕ್ಷನ್ 42 ಮತ್ತು ಕಾರಾಗೃಹ ಕಾಯ್ದೆ 2022ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇನ್ನು, ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷ ಕಳೆದರೂ ಚಾರ್ಜ್‌ಶೀಟ್ ದಾಖಲಾಗದೆ ಇನ್ನೂ ತನಿಖೆಯಲ್ಲೇ ಸಿಲುಕಿಕೊಂಡಿದೆ. 2024ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳಲ್ಲಿ ನಟ ದರ್ಶನ್ , ಕೆಲವು ರೌಡಿಗಳು ಹಾಗೂ ಜೈಲು ಅಧಿಕಾರಿಗಳು ಆರೋಪಿಗಳಾಗಿದ್ದರು. ಮೊದಲ ಕೇಸ್‌ನಲ್ಲಿ ದರ್ಶನ್‌ಗೆ ಸಿಗರೇಟ್ ಸಿಕ್ಕಿದ್ದು, ಎರಡನೇ ಕೇಸ್‌ನಲ್ಲಿ ದರ್ಶನ್ ಮೊಬೈಲ್ ಬಳಸಿದ್ದು ಹಾಗೂ ಮೂರನೇಯದಾಗಿ ಮಧ್ಯರಾತ್ರಿ ವಸ್ತು ಸಾಗಾಟ ನಡೆದಿದೆ ಎಂಬ ಆರೋಪದ ಕುರಿತು, ಪಿಸಿ ಆಕ್ಟ್ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆದರೂ, ವರ್ಷ ಕಳೆದರೂ ಕೋರ್ಟ್‌ಗೆ ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿಲ್ಲ. ದರ್ಶನ್ ಪ್ರಕರಣದ ಬಳಿಕವೂ ಜೈಲಿನಲ್ಲಿ 30ಕ್ಕೂ ಹೆಚ್ಚು ಮೊಬೈಲ್, ಮಾದಕ ವಸ್ತು ಹಾಗೂ ಶಸ್ತ್ರ ಪತ್ತೆಯ ಕೇಸ್‌ಗಳು ದಾಖಲಾಗಿದ್ದು, 27 ಕೇಸ್‌ಗಳ ಅಂತಿಮ ವರದಿ ಇನ್ನೂ ಸಲ್ಲಿಕೆಯಾಗಿಲ್ಲ ಎಂದು ತಿಳಿದುಬಂದಿದೆ.

