ಶಾಸಕ ಕೋನರೆಡ್ಡಿ ನೇತೃತ್ವದಲ್ಲಿ ರೈತರ ಮಹತ್ವದ ಸಭೆ

Dharwad News: ನವಲಗುಂದ: ನವಲಗುಂದದಲ್ಲಿ ಚಕ್ಕಡಿ ದಾರಿ ನಿರ್ಮಾಣದ ಕುರಿತಂತೆ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ನಡುವೆ ರಾಜಕೀಯ ತಾರಕಕ್ಕೇರಿದೆ. ಈ ನಡುವೆ ನವಲಗುಂದ ಪಟ್ಟಣದ ರೈತರು ಹಾಗೂ ಸಾರ್ವಜನಿಕರು ಪಟ್ಟಣದಲ್ಲಿ ಸಭೆ ನಡೆಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.‌

ಹೌದು, ಇಲ್ಲಿನ ಚಾವಡಿಯಲ್ಲಿ ಮಂಗಳವಾರ ಸಂಜೆ ಶಾಸಕ ಎನ್.ಹೆಚ್.ಕೊನರೆಡ್ಡಿ ಸಮ್ಮುಖದಲ್ಲಿ ಸಭೆ ನಡೆಸಿ, ಚಕ್ಕಡಿ ರಸ್ತೆ ನಿರ್ಮಾಣ ಕಾಮಗಾರಿ ಸಂಪೂರ್ಣ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು. ಅಷ್ಟೇ ಅಲ್ಲದೇ ಮಾಜಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ಜೀವನ ಪವಾರ್ ಮಾತನಾಡಿ, ನವಲಗುಂದ ಪಟ್ಟಣದ ರಸ್ತೆಗಳು ಹದಗೆಟ್ಟಿದ್ದು, ಮಳೆ ಬಂದರೆ ಸಾಕು ಹೊರಗಡೆ ಓಡಾಡದ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಚಕ್ಕಡಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸುಖಾಸುಮ್ಮನೆ ಮಾಜಿ ಸಚಿವರು ಅಭಿವೃದ್ದಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಈ ಹಿಂದೆ ಅವರು ಶಾಸಕರು ಮತ್ತೆ ಸಚಿವರು ಇದ್ದಾಗ ಅನೇಕ ಬಾರಿ ಮನವಿ ಕೊಟ್ಟಿದ್ದೇವೆ. ಆದರೂ ಒಂದು ಬುಟ್ಟಿ ಮಣ್ಣು ಹಾಕಲಿಲ್ಲ‌. ಯಾವುದೇ ಕೆಲಸ ಮಾಡಲಿಲ್ಲ‌. ಇದೀಗ ಅಭಿವೃದ್ಧಿ ಕೆಲಸ ಮಾಡೋದನ್ನು ನೋಡಿ ಹೊಟ್ಟೆ ಕಿಚ್ಚಿನಿಂದ ಹುಚ್ಚಾಟ ಮಾಡುತ್ತಿದ್ದಾರೆ. ಇವರು ಕೆಲಸ ಮಾಡೋದಿಲ್ಲ. ಮಾಡುವವರಿಗೂ ಬಿಡೋದಿಲ್ಲ. ಹೀಗಾಗಿ ನವಲಗುಂದ ಅಭಿವೃದ್ಧಿ ಕುಂಠಿತಗೊಂಡಿದೆ. ಯಾರು ವಿರೋಧ ಮಾಡಿದ್ದಾರೆ ಅವರಿಗೆ ತಕ್ಕಪಾಠವನ್ನು ಕಲಿಸೋಣ ಎಂದರು.

ಇಂದು ದುಷ್ಟ ಶಕ್ತಿಗಳು ಅಭಿವೃದ್ಧಿ ಕೆಲಸವನ್ನು ನಿಲ್ಲಿಸಿವೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಯಾವೊಂದು ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ನಿಲ್ಲಮ್ಮನ ಕೆರೆ ಹುಳ‌ನ್ನು ಧರ್ಮಸ್ಥಳ ಸಂಘ 17.90 ಲಕ್ಷ ರೂ ಖರ್ಚು ಮಾಡಿ ಹುಳು ತೆಗೆದಿದೆ. ಆದರೆ ಮಾಜಿ ಸಚಿವರು ಮಾತ್ರ ಬಂದು ನೋಡಲಿಲ್ಲ. ಇದೀಗ ಇವರಿಗೆ ತಕರಾರು ಮಾಡುವ ನೈತಿಕ ಹಕ್ಕಿಲ್ಲ. ತಾವು ಮಾಡುವುದಿಲ್ಲ. ಮಾಡೋರಿಗೆ ಕೊಡುವುದಿಲ್ಲ. ಈ ಹಿಂದೆಯೇ ಗುಡ್ಡದ ಮಣ್ಣು ತೆಗೆಯಲು ಠರಾವು ಮಾಡಲಾಗಿದೆ. ಈ ಹಿಂದೆ ಮಾಜಿ ಸಚಿವರು ಪಟ್ಟಣದ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ನಗರೋತ್ಥಾನ ಯೋಜನೆ ಅಡಿಯಲ್ಲಿ 6 ಕೋಟಿ ಹಣ ಖರ್ಚು ರಸ್ತೆ ಮಾಡಿದ್ದಾರೆ. ಆದರೆ ಒಂದು ವರ್ಷ ಕಳೆಯೋದರಲ್ಲಿ ರಸ್ತೆ ಕಿತ್ತು ಬರುತ್ತಿದೆ. ಅಂತಹ ಕೆಲಸ ಮಾಡಿದ್ದೀರಿ. ಇದೀಗ ಅನುದಾನಯಿಲ್ಲದೇ ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳತ್ತಾ ಇದ್ದೇವೆ ಯಾಕೆ ಅಡ್ಡಿ ಮಾಡತ್ತೀರಿ? ಅಧಿಕಾರಕ್ಕೆ ಬರಬೇಕಾದರೆ ನಾಲ್ಕು ಮುಂದಿಗೆ ಹಚ್ಚಿಕೊಳ್ಳುವ ಕೆಲಸ ಮಾಡಿ. ನವಲಗುಂದ ಜನತೆ ಮತ ಹಾಕುತ್ತಾರೆ. ಇದೊಂದು ನಿಜವಾಗಿಯೂ ದುರಂತ. ನವಲಗುಂದ ಜನತೆ ನಿಮ್ಮನ್ನು ಕ್ಷಮಿಸೋದಿಲ್ಲ. ಕೊಟ್ಟ ಹೇಳಿಕೆ ವಾಪಾಸ್ ಪಡೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿ ಶಾಸಕರು ಅವರ ಇಚ್ಚೆಯಿಂದ ಚಕ್ಕಡಿ ರಸ್ತೆ ಮಾಡಿಲ್ಲ. ಜನರ ಒತ್ತಾಯದಿಂದ ಮಾಡಿದ್ದಾರೆ. ಗುಡ್ಡದ ಮಣ್ಣು ನಮ್ಮದು, ಹೀಗಾಗಿ ನಮ್ಮ ಮಣ್ಣು ನಮ್ಮ ದಾರಿ ನಾವು ಮಾಡಿಕೊಳ್ಳತ್ತೇವೆ. ಊರಿನ ಮಣ್ಣು ಊರಿನಲ್ಲಿ ಬಿದ್ದಿದೆ. ಕೆಲಸಕ್ಕೆ ವಿರೋಧ ಮಾಡಬೇಡಿ. ನೀವು ಮನುಷ್ಯರೇ ಅಲ್ಲ. ಬಾಯಿಯಿಲ್ಲದ ಬಸವಣ್ಣನ ಶಾಪವೇ ಅವರಿಗೆ ತಟ್ಟುತ್ತದೆ ಎಂದರು.

ರೈತರ ಹಾಗೂ ಸಾರ್ವಜನಿಕ ಮಾತು ಆಲಿಸಿ ಬಳಿಕ ಮಾತನಾಡಿದ ಶಾಸಕ ಎನ್.ಹೆಚ್.ಕೊನರೆಡ್ಡಿ, ಅಭಿವೃದ್ಧಿ ಕಾರ್ಯವನ್ನೇ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಗುಡ್ಡದ ಮಣ್ಣು ಪುರಸಭೆಯ ಸ್ವತ್ತು. 23 ಜನರು ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಯಾರು ಅಡ್ಡಿ ಪಡಿಸಬೇಡಿ. ರಸ್ತೆ ಕಾಮಗಾರಿ ಸಂಪೂರ್ಣ ಮಾಡಿಯೇ ತೀರುತ್ತೇನೆ. ಅಷ್ಟೇ ಅಲ್ಲದೇ ಟಾರ್ ರಸ್ತೆ ನಿರ್ಮಿಸಿ ಜನರಿಗೆ ಕೊಡುತ್ತೇನೆ ಎಂದರು.

ಬಳಿಕ ಗ್ರಾಮಸ್ಥರು ತಾವು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಶಾಸಕರಿಗೂ ನೀಡಿ, ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಶೋಕ ಮದಗುಣಿಕಿ, ದೇವೆಂದ್ರಪ್ಪ ಹಳ್ಳದ, ಬಾಬಣ್ಣ ಗಾಯಕವಾಡ, ಜಾವಿದ್ ಗುತ್ತಲ, ಲಕ್ಷ್ಮಣ ಹಳ್ಳದ, ಮೃತ್ಯಂಜಯ ಜಾಬಿನ್, ಸಂತೋಷ ಪಾಟೀಲ್ ಸೇರಿದಂತೆ ಗ್ರಾಮದ ರೈತರು, ಸಾರ್ವಜನಿಕರು ಇದ್ದರು.

ಏನಿದು ಮಣ್ಣು ರಾಜಕೀಯ..?:

ಕಳೆದ ಆಗಸ್ಟ್ 17 ರಂದು ಮಾಜಿ ಸಚಿವರಾದ ಶಂಕರಪಾಟೀಲ್ ಮುನೇನಕೊಪ್ಪ ಅವರು, ನವಲಗುಂದ ಪಟ್ಟಣದ ಪಾರಂಪರಿಕ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಕೊಳ್ಳೆ ಹೊಡೆಯಲಾಗುತ್ತಿದೆ ಎಂಬ ಜನರ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಪಾರದರ್ಶಕ ಕಾನೂನು ಉಲ್ಲಂಘನೆ ಮಾಡಿ, ಚಕ್ಕಡಿ ರಸ್ತೆಗಳ ನಿರ್ಮಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗುತ್ತಿದೆ. ಸರ್ಕಾರ ಇದನ್ನು ತನಿಖೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

About The Author