ನಿಗಮ ಮಂಡಳಿ ಸ್ಥಾನದ ನಿರೀಕ್ಷೆಯಲ್ಲಿದ್ದ, ತುಮಕೂರು ಜಿಲ್ಲೆಯ ಕಾರ್ಯಕರ್ತರು ನಿರಾಸೆಗೆ ಒಳಗಾಗಿದ್ದಾರೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಶಿರಾ ತಾಲೂಕಿನ ಹಾರೋಗೆರೆ ಮಹೇಶ್ ಅವ್ರನ್ನು ನೇಮಕ ಮಾಡಿದ್ದನ್ನು ಬಿಟ್ಟರೆ, ತುಮಕೂರು ಜಿಲ್ಲೆಯ ಯಾವೊಬ್ಬ ಕಾರ್ಯಕರ್ತರಿಗೂ ಅವಕಾಶ ಕೊಟ್ಟಿಲ್ಲ.
ಪ್ರತಿ ಬಾರಿಯೂ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಿ, ನಿಗಮ ಮಂಡಳಿ ಅಥವಾ ಸರ್ಕಾರದ ಸಂಸ್ಥೆಗಳಲ್ಲಿ ಅಧಿಕಾರ ನೀಡಬಹುದೆಂಬ ನಿರೀಕ್ಷೆಯಲ್ಲಿ ಇದ್ದವರು ಹತಾಶರಾಗಿದ್ದಾರೆ. ಮೊದಲ ಹಂತದಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್‌ಗೆ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಈಗ ಹಾರೋಗೆರೆ ಮಹೇಶ್‌ಗೆ ಅವಕಾಶ ಕೊಟ್ಟಿದ್ದಾರೆ. ಜಿಲ್ಲೆಯ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ.
ನಿರ್ದೇಶಕರು, ನಾಮಿನಿ ಸದಸ್ಯರನ್ನಾಗಿ ನೇಮಿಸುವ ಕಡೆಗಳಲ್ಲೂ, ತುಮಕೂರು ಜಿಲ್ಲೆಯವ್ರನ್ನು ಪರಿಗಣಿಸುತ್ತಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ತುಮಕೂರು ಸಿಂಡಿಕೇಟ್ ಸದಸ್ಯರನ್ನು ನೇಮಿಸುವ ಸಮಯದಲ್ಲೂ, ಜಿಲ್ಲೆಯವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಆಗೇ ಉಳಿದಿದೆ.
ಸ್ಥಳೀಯ ಮಟ್ಟದಲ್ಲಿ ಎಪಿಎಂಸಿ, ಜಿಲ್ಲಾಸ್ಪತ್ರೆ, ಹಾಪ್‌ಕಾಮ್ಸ್, ಬಂದಿಖಾನೆ ಸೇರಿ, ಹಲವು ಸಂಸ್ಥೆಗಳಿಗೆ ನಾಮಿನಿ ಸದಸ್ಯರನ್ನು ನೇಮಿಸುವ ಅವಕಾಶಗಳಿವೆ. ಕನಿಷ್ಠ ಪಕ್ಷ ಅದನ್ನ ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ಅಸಮಾಧಾನ ಹೊರಹಾಕ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಬೆವರು ಹರಿಸಿದ್ದೇವೆ. ಆದರೂ ನಮ್ಮನ್ನು ಗುರುತಿಸಿಲ್ಲ. ಸುಮ್ಮನೆ ಇನ್ನೆಷ್ಟು ದಿನ ಕಾಯುತ್ತಾ ಕುಳಿತುಕೊಳ್ಳವುದು. ಲೋಕಸಭೆ ಚುನಾವಣೆ ವೇಳೆಯೂ ಪಕ್ಷಕ್ಕೆ ಹೆಗಲು ಕೊಟ್ಟು ನಿಂತಿದ್ದೇವೆ. ದುಡಿಯುವ ಎತ್ತಿಗೆ ಮೇವು,ನೀರು ಕೊಡದಿದ್ದರೆ ಹೇಗೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.