ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕವಾಗಿ ನಮಾಜ್ ಸಲ್ಲಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಿಂದ ರಾಜಕೀಯಲ್ಲಿ ಭಾರೀ ಚರ್ಚೆ ಉಂಟಾಗಿದೆ. ಮುಸ್ಲಿಂರು ವಿಮಾನ ನಿಲ್ದಾಣದ ಆವರಣದಲ್ಲಿ ಸಾಲಾಗಿ ನಿಂತು ಪ್ರಾರ್ಥನೆ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಬಿಜೆಪಿ ಮುಖಂಡರು ವಿಮಾನ ನಿಲ್ದಾಣವನ್ನೇ ಮಸೀದಿಯಂತೆ ಬಳಸಲು ಯಾರಿಂದ ಅನುಮತಿ ನೀಡಲಾಗಿದೆ? ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರ ನಡುವೆ, ಮುಸ್ಲಿಮರ ಪ್ರಾರ್ಥನೆಯನ್ನು ಸಮರ್ಥಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಮುಸ್ಲಿಮರು ಮಾಡಿದ್ದು ಪ್ರಾರ್ಥನೆ, ಕೋಲು ಹಿಡಿದುಕೊಂಡು ಹೋಗೊದಲ್ಲ. ಮುಸ್ಲಿಮರ ಶ್ರದ್ಧೆ ನೋಡಿ ಕಲಿಯಬೇಕು. ಅವರು ಎಲ್ಲೆ ಇದ್ದರೂ ಮನದ ನೆಮ್ಮದಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಅದು ಬಸ್ ಸ್ಟ್ಯಾಂಡ್ ಆಗಿರಲಿ, ರಸ್ತೆ ಆಗಿರಲಿ ಅಥವಾ ವಿಮಾನ ನಿಲ್ದಾಣವಾಗಿರಲಿ. ಎಲ್ಲೆಡೆ ಅಚ್ಚುಕಟ್ಟಾಗಿ ನಮಾಜ್ ಮಾಡುತ್ತಾರೆ. ನಮ್ಮವರಂತೆ ನಾಮ ಹಾಕಿಕೊಂಡು ಪೂಜೆ ಮಾಡಿ ತಟ್ಟೆಗೆ ದಕ್ಷಿಣೆ ಹಾಕಿ ಅಂತ ಕೇಳಲ್ಲ.
ಅವರು ಮೂರ್ಖರಲ್ಲ, ಮಸೀದಿ ಇಲ್ಲದ ಕಾರಣ ಅಲ್ಲಿ ಪ್ರಾರ್ಥನೆ ಮಾಡಿರಬಹುದು. ಅದರಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ? ಗಣೇಶನ ಹಬ್ಬದಲ್ಲಿ ಬ್ರ್ಯಾಂಡಿ ಅಂಗಡಿಗಳು ಫುಲ್ ರಶ್ ಇರುತ್ತವೆ. ಗಣೇಶ ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಬದಲಾಗಿ ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಹೌಸ್ಫುಲ್ ಆಗುತ್ತವೆ ಎಂದು ಆಂಜನೇಯ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ


