ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋ ಆರಂಭದಿಂದಲೇ ನೋಡುಗರ ಮನ ಗೆದ್ದಿತ್ತು. 14 ಸೆಲೆಬ್ರಿಟಿಗಳಿಗೆ ಜೋಡಿಯಾಗಿ ಸಾಮಾನ್ಯ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ, ಅವರ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ತೋರಿಸಿಕೊಳ್ಳುವ ಅವಕಾಶ ಇದಾಗಿತ್ತು.
ಇದೀಗ ‘ಡಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋ ಮುಗಿದಿದ್ದು, ಫಿನಾಲೆಯಲ್ಲಿ ಚಾಂಪಿಯನ್ ಟ್ರೋಫಿಯನ್ನು ಅನ್ಮೋಲ್ ಹಾಗೂ ಆದಿತ್ಯ ಪಡೆದುಕೊಂಡಿದ್ದಾರೆ. ಆರಂಭದಿಂದಲೇ ಅವರು ಅದ್ಬುತ ಡ್ಯಾನ್ಸ್ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಜಡ್ಜಸ್ ಗಳ ಮನಸ್ಸನ್ನು ಕೂಡ ಗೆದ್ದಿದ್ದರು.
ಅಂತಿಮ ಸುತ್ತು ತಲುಪಿದ ಐದು ಜೋಡಿಗಳಲ್ಲಿ ಅನ್ಮೋಲ್ ಹಾಗೂ ಆದಿತ್ಯ ‘ಡಾನ್ಸಿಂಗ್ ಚಾಂಪಿಯನ್’ ಟ್ರೋಫಿಯನ್ನ ಗೆದ್ದಿದ್ದು, ಇದರ ಜೊತೆಗೆ 5 ಲಕ್ಷ ರೂ ಬಹುಮಾನ ಕೂಡ ದೊರಕಿದೆ. ಇನ್ನು ಫಿನಾಲೆಯಲ್ಲಿ ಅನ್ಮೋಲ್-ಆದಿತ್ಯ, ಆರಾಧ್ಯಾ-ನಿವೇದಿತಾ, ಚಂದನಾ-ಅಕ್ಷತಾ, ಆರ್ಜುನ್-ರಾಣಿ, ಮತ್ತು ಅದಿತಿ-ಸಾಗರ್ ರವರು ಇದ್ದರು.
ಇನ್ನು ಈ ಕಾರ್ಯಕ್ರಮವನ್ನ ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಅರ್ಪಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ನಟ ಧ್ರುವ ಸರ್ಜಾ ಆಗಮಿಸಿದ್ದರು.
ಇನ್ನು ಚಾಂಪಿಯನ್ ಶಿಪ್ ಟ್ರೋಫಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅನಾವರಣಗೊಳಿಸಿ, ನಂತರ ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ಹಾಗೂ ನಟ ಧ್ರುವ ಸರ್ಜಾ, ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿ, ‘ಪೊಗರು’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ