ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೆಕ್ಕೆಜೋಳಕ್ಕೆ ಪ್ರತಿಕ್ವಿಂಟಲ್‌ಗೆ 3,000 ರೂ. ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಧರಣಿ ಎರಡನೇ ದಿನಕ್ಕೂ ಜೋರಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೈನ್ಯದ ನೇತೃತ್ವದಲ್ಲಿ ಈ ಪ್ರತಿಭಟನೆ ಶಾಂತವಾದರೂ ದೃಢವಾದ ರೀತಿಯಲ್ಲಿ ನಡೆಯುತ್ತಿದೆ.
ರೈತರು, ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸದೇ ಇರುವುದನ್ನು ಖಂಡಿಸಿ, ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತಾಡಿದ ರೈತರು, ನಮ್ಮ ಧ್ವನಿಗೆ ಯಾರೂ ಸ್ಪಂದಿಸುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೀವಂತವಾಗಿದ್ದರೆ ನಮ್ಮ ಸಮಸ್ಯೆಗಳನ್ನು ಕೇಳಬೇಕಿತ್ತು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಅದೇ ವೇಳೆ, ಹೋರಾಟ ತೀವ್ರವಾಗುವ ಮುನ್ನ ಸರ್ಕಾರ ಪರಿಹಾರ ಕಂಡುಹಿಡಿಯಬೇಕು ಎಂದು ರೈತರು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಜೈಲಿಗೆ ಹೋಗಲು ನಾವು ಸಿದ್ಧ. ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು ಎಂದು ರೈತರು ಹೇಳಿದರು.
ವರದಿ : ಲಾವಣ್ಯ ಅನಿಗೋಳ

