ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ರಾಜಕೀಯ ಸುಳಿವುಗಳನ್ನ ನೀಡುತ್ತಿದೆ.
ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಅಖಿಲಾ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಅಣ್ಣಾಮಲೈ ಅವರಿಗೆ ಮಹತ್ವದ ಸಂದೇಶ ನೀಡಲಿದ್ದೇವೆ ಅಂತ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ರು. ಆದರೇ, ಬಹುಪಾಲು ಮಂದಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆ ಅಣ್ಣಾಮಲೈ ಅವರಿಗೆ ಸಿಗಲಿದೆ ಎಂದೇ ಹೇಳುತ್ತಿದ್ದಾರೆ. ಆದರೇ, ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಹಾಗಾಗಿಯೇ ಅಣ್ಣಾಮಲೈ ಕುಕ್ಕೆ ಭೇಟಿ ಮಹತ್ವದ ಸಂದೇಶ ನೀಡುತ್ತಿದೆ.

ನನ್ನ ನೆಲ ನನ್ನ ಜಲ ಅನ್ನೋ ಎನ್ ಮಣ್ ಎನ್ ಮಕ್ಕಳ್ ಹೆಸರಿನಲ್ಲಿ ಅಣ್ಣಾಮಲೈ ಜನಸಂಪರ್ಕ ಯಾತ್ರೆಯ ಮೂಲಕ ತಮಿಳುನಾಡಿನಲ್ಲಿ ಸಾವಿರಾರು ಜನರನ್ನು ನೇರವಾಗಿ ಸಂಪರ್ಕಿಸಿ, ಬಿಜೆಪಿಯನ್ನು ಬಲಪಡಿಸಿದ್ದರು. ಇದೀಗ ಮಹತ್ವದ ಸ್ಥಾನ ಸಿಗುವ ಸೂಚನೆ ಸಿಕ್ಕ ಕೂಡಲೇ ಕುಕ್ಕೆಗೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ ಕರಾವಳಿ ಭಾಗಕ್ಕೆ ಪೊಲೀಸ್ ಅಧಿಕಾರಿಯಾಗಿ ಕಾಲಿಟ್ಟಾಗಲೂ ಇದೇ ಕುಕ್ಕೆ ಕ್ಷೇತ್ರಕ್ಕೆ ಭೇಟಿ ಕೊಟ್ಟು ಶುಭಾರಂಭ ಮಾಡಿದ್ರು. ಇದೀಗ ಮಹತ್ವದ ಸ್ಥಾನಮಾನ ಸಿಗುವ ಮುಂಚೆಯೇ ದೇವರ ಆಶೀರ್ವಾದ ಪಡೆದು ಮಹತ್ವದ ಮೆಸೇಜ್ ನೀಡಿದ್ದಾರೆ.
ದಕ್ಷಿಣವನ್ನೇ ಗೆಲ್ಲಬೇಕು ಅನ್ನೋ ಮೋದಿ, ಅಮಿತ್ ಶಾ ಅಣತಿಯಂತೆಯೇ ಆಪರೇಷನ್ ದ್ರಾವಿಡದ ನೇತೃತ್ವವನ್ನು ಅಣ್ಣಾಮಲೈ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.. ಇದಕ್ಕೆ ಜೊತೆಯಾಗಿ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಉಪ ದಂಡನಾಯಕರಾಗಲಿದ್ದಾರೆ ಎಂಬುದು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರ್ತಿರೋ ಸಂಗತಿ.. ಇಡೀ ದಕ್ಷಿಣ ಗೆಲ್ಲುತ್ತಾ ಅಣ್ಣಾಮಲೈ ಹಾಗೂ ಪವನ್ ಕಲ್ಯಾಣ್ ಜೋಡಿ ಕಾಮೆಂಟ್ ಮಾಡಿ.

