ಹಾಸನದಲ್ಲಿ 9 ಅಮಾಯಕ ಜೀವಗಳ ಸಾವಿಗೆ ಕಾರಣನಾದ ಟ್ರಕ್ ಚಾಲಕ ಭುವನೇಶ್, ಸದ್ಯ ಎಲ್ಲಿದ್ದಾನೋ ಗೊತ್ತಿಲ್ಲ. ಪೊಲೀಸರು ಈ ಬಗ್ಗೆ ಸುಳಿವು ಬಿಟ್ಟು ಕೊಡ್ತಿಲ್ಲ. ಸೆಪ್ಟೆಂಬರ್ 12ರಂದು ಮೊಸಳೆ ಹೊಸಹಳ್ಳಿ ಬಳಿ, ಗಣೇಶ ಮೆರವಣಿಗೆ ವಿಸರ್ಜನಾ ಮೆರವಣಿಗೆ ಮೇಲೆ ಭುವನೇಶ್ ಟ್ರಕ್ ಹರಿಸಿದ್ದ. ಸದ್ಯ ಹಾಸನ, ಹೊಳೆನರಸೀಪುರ ನಗರ ವ್ಯಾಪ್ತಿಯಲ್ಲಿ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಭುವನೇಶ್ ಸುಳಿವು ಸಿಕ್ಕಿದ್ರೆ, ಕಾನೂನು ಕೈಮೀರುವ ಆಂತಕ ಇದೆ. ಹೀಗಾಗಿ, ಭುವನೇಶ್‌ನನ್ನ ಪೊಲೀಸರು ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ. ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರ ಪರಿಣಾಮ, ಆರೋಪಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ.
ಮೊಸಳೆ ಹೊಸಹಳ್ಳಿಗೂ ಮುಂಚೆ ಅದೇ ದಿನ, ಸ್ವಲ್ಪ ಸಮಯಕ್ಕೂ ಮೊದಲು, ಇನ್ನೊಂದು ಆಕ್ಸಿಡೆಂಟ್ ಮಾಡಿಕೊಂಡು ಬಂದಿದ್ದಾನಂತೆ. ಆರೋಪಿ ಭುವನೇಶ್, ಹಾಸನ ನಗರದ ಚನ್ನಪಟ್ಟಣ ಬೈಪಾಸ್‌ನಲ್ಲೂ, ಆಟೋ, ಬೈಕ್‌ಗಳಿಗೆ ಗುದ್ದಿಕೊಂಡು ಬಂದಿದ್ದಾನೆ. ಅತಿಯಾದ ವೇಗದಿಂದ ಡ್ರೈವ್ ಮಾಡ್ತಿದ್ದ ಎನ್ನಲಾಗಿದೆ. ಅಲ್ಲಿಂದ ನೇರವಾಗಿ ಮೊಸಳೆ ಹೊಸಹಳ್ಳಿ ಕಡೆ ಬಂದಿದ್ದು, ಅಲ್ಲೂ ಆಟೋವೊಂದಕ್ಕೆ ಡಿಕ್ಕಿಯಾಗಬೇಕಿತ್ತು. ಸೆಕೆಂಡ್‌ಗಳ ಅಂತರದಲ್ಲಿ ಆಟೋ ಪಾಸ್ ಆಗಿದೆ. ಬಳಿಕ, ಮೆರವಣಿಗೆ ನೋಡ್ಕೊಂಡ್ ನಿಧಾನವಾಗಿ, ಬೈಕಲ್ಲಿ ಹೋಗ್ತಿದ್ದ ಪ್ರಭಾಕರ್‌ನ ಅದೃಷ್ಟ ಕೈಕೊಟ್ಟಿತ್ತು. ಟ್ರಕ್ ಡಿಕ್ಕಿಯಾಗುತ್ತಿದ್ದಂತೆ ಹಾರಿ ಬಿದ್ದಿದ್ದಾರೆ. ಅಲ್ಲಿಂದ ಮೆರವಣಿಗೆ ಮೇಲೆ ಟ್ರಕ್ ಹರಿದಿದೆ.
ಸ್ಥಳೀಯರು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಭುವನೇಶ್ ಕುಡಿದಿದ್ದ ಎನ್ನಲಾಗ್ತಿದೆ. ಡ್ರಿಂಕ್ಸ್ ಮಾಡಿದ್ದಲ್ಲದೇ ಅತೀ ವೇಗವಾಗಿ ಡ್ರೈವ್ ಮಾಡುತ್ತಿದ್ದ. ಹೀಗಾಗಿಯೇ ದುರಂತಕ್ಕೆ ಕಾರಣನಾಗಿದ್ದಾನೆ ಅಂತಿದ್ದಾರೆ. ಸದ್ಯ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ತನಿಖೆ ಬಳಿಕವಷ್ಟೇ ಭುವನೇಶ್ ಎಲ್ಲಿಂದ ಬರ್ತಿದ್ದ. ಎಲ್ಲಿಗೆ ಹೋಗ್ತಿದ್ದ. ಚನ್ನಪಟ್ಟಣ ಬೈಪಾಸ್‌ನಲ್ಲಿ ಏನಾಯ್ತು. ಮೊಸಳೆ ಹೊಸಹಳ್ಳಿ ಬಳಿ ದುರಂತಕ್ಕೆ ಕಾರಣ ಏನು ಅನ್ನೋದು ಗೊತ್ತಾಗಲಿದೆ.

