ರಾಜ್ಯದಲ್ಲಿ ಮತ್ತೊಂದು ದೊಡ್ಡ ಯೋಜನೆ: DK ಗೆ ಕೇಂದ್ರ ಅಸ್ತು

ಪರಿಸರವಾದಿಗಳ ವಿರೋಧಗಳಿದ್ದರೂ, ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ತಿಳಿಸಿದರು.

ಜಲಸಂಪನ್ಮೂಲ ಸಚಿವರು ಬುಧವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ನದಿ ಜೋಡಣೆ ವಿಶೇಷ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಬೇಡ್ತಿ–ವರದಾ ಯೋಜನೆ ಕುರಿತಾಗಿ ಚರ್ಚೆ ನಡೆಸಲಾಗಿದ್ದು, DPR ನ್ನು ಜಲಶಕ್ತಿ ಸಚಿವಾಲಯವೇ ತಯಾರಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಯೋಜನೆಗೆ ₹10 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ 19 ಸಾವಿರ ಕೋಟಿ ಕೇಂದ್ರ ಸರ್ಕಾರವೇ ಭರಿಸಲು ಸಿದ್ಧವಿದೆ ಎಂದು ಶಿವಕುಮಾರ್ ಹೇಳಿದರು. ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ಬರಪೀಡಿತ ಪೂರ್ವ ಭಾಗಕ್ಕೆ ತಿರುಗಿಸಲು ಈ ಯೋಜನೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗೋದಾವರಿ–ಕಾವೇರಿ ನದಿ ಜೋಡಣೆಯ ಮೊದಲ ಹಂತದಲ್ಲಿ 148 TMC ಅಡಿ ನೀರನ್ನು ತಿರುಗಿಸಲು ಯೋಜನೆ ಇದೆ. ಆದರೆ, ಕರ್ನಾಟಕಕ್ಕೆ ಕೇವಲ 15.90 TMC ಅಡಿ ನೀರನ್ನಷ್ಟೇ ನೀಡಲಾಗಿದೆ. ಬೇಡ್ತಿ–ವರದಾ ಜೋಡಣೆ ನಂತರ ಕೂಡ ರಾಜ್ಯಕ್ಕೆ ಸಿಗುವ ನೀರು ಕೇವಲ 34.40 ಟಿಎಂಸಿ ಅಡಿಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಅಸಮಾಧಾನಪಟ್ಟರು.

ಕರ್ನಾಟಕಕ್ಕೆ ಕನಿಷ್ಠ 40-45 ಟಿಎಂಸಿ ಅಡಿ ನೀರು ನೀಡಬೇಕು. ಗೋದಾವರಿ–ಕಾವೇರಿ ಜೋಡಣೆಯಿಂದ ಭೀಮಾ ನದಿ ಪ್ರದೇಶಕ್ಕೆ ಹೆಚ್ಚುವರಿ 5 ಟಿಎಂಸಿ ಅಡಿ ನೀರು ನೀಡಲು ಮನವಿ ಮಾಡಿದ್ದೇವೆ” ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮುದ್ರಕ್ಕೆ ಹೋಗಿ ವ್ಯರ್ಥವಾಗುವ ನೀರನ್ನು ಜನರ ಹಿತಕ್ಕಾಗಿ ಬಳಸುವುದೇ ನಮ್ಮ ಗುರಿ. ಕೇಂದ್ರ ₹10 ಸಾವಿರ ಕೋಟಿ ಹೂಡಿಕೆಗೆ ಸಿದ್ಧವಾಗಿರುವಾಗ ನಮಗೆ ಬೇಕೇ ಬೇಡವೇ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author