5 ಹುಲಿ ಸಾವಿನ ಊರಿನಲ್ಲಿ ಮತ್ತೊಂದು ಕಳೆಬರ ಪತ್ತೆ!

ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು ಸಾವಿಗೀಡಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆ ನಂತರ ಹುಲಿಗಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿತ್ತು. ಆದರೆ, ಮಾದಪ್ಪನ ಬೆಟ್ಟದ ತಪ್ಪಲಲ್ಲಿ ಮತ್ತೊಂದು ಕಳೇಬರ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಬೇಟೆಗಾರರು ಸಕ್ರಿಯರಾಗಿರುವ ಅನುಮಾನ ಸೃಷ್ಟಿಯಾಗಿದೆ.

ಹನೂರು ತಾಲ್ಲೂಕಿನಲ್ಲಿ ಮಣ್ಣಿನಲ್ಲಿ ಮರೆಮಾಚಿ ಇಡಲಾಗಿದ್ದ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ. ಹುಲಿಯ ತಲೆ, ಭುಜ, ಮುಂಗಾಲುಗಳು ಮಾತ್ರ ಲಭ್ಯವಾಗಿದೆ. ಉಳಿದ ಭಾಗಗಳು ನಾಪತ್ತೆಯಾಗಿದೆ. ಈ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಪಿಸಿಸಿಎಫ್ ತಂಡದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಪಿಸಿಸಿಎಫ್ ತಂಡದ ಸ್ಮಿತಾ ಬಿಜ್ಜೂರು ಅಧಿಕಾರಿಗಳ ನೇತೃತ್ವದಲ್ಲಿ 8 ದಿನಗಳಲ್ಲಿ ವರದಿ ಸಲ್ಲಿಸಿ, ಹುಲಿಯ ಹಂತಕರನ್ನು ಪತ್ತೆಮಾಡಲು ಮುಂದಾಗಬೇಕು ಎಂದು ಸಚಿವ ಖಂಡ್ರೆ ಸೂಚಿಸಿದ್ದಾರೆ. ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳ್ಳಬೇಟೆ ಘಟನೆ ಬಗ್ಗೆ ಸ್ಥಳೀಯರು ಮತ್ತು ಪರಿಸರ ಸಂರಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರ ಇಲಾಖೆ ಮತ್ತು ವನ್ಯಜೀವಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹುಲಿ ಕಳೇಬರ ಸಿಕ್ಕಿದ ವಿಚಾರವಾಗಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಹತ್ತಿರ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಅರ್ಧ ಕಳೇಬರವೊಂದು ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಕಳೇಬರದ ಇನ್ನುಳಿದ ಭಾಗವನ್ನು ಹುಡುಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಕಳ್ಳ ಬೇಟೆಯ ಪ್ರಕರಣವೆಂದೇ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಸೀನ್ ಆಫ್ ಕೈಂ (SoCo), ಶ್ವಾನ ತನಿಖಾ ದಳ ಮತ್ತಿತರ ಸಹಾಯದಿಂದ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಪ್ರಾರಂಭಿಸಿದೆ. ಪ್ರಕರಣಕ್ಕೆ ಕಾರಣ ಮತ್ತು ಕಾರಣಕರ್ತರನ್ನು ಅದಷ್ಟು ಬೇಗೆ ಪತ್ತೆ ಹಚ್ಚಲಾಗುವುದು. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ವರದಿ : ಲಾವಣ್ಯ ಅನಿಗೋಳ

About The Author