ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಲೋಕಾ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದರೂ, ಇತ್ತೀಚೆಗೆ ವಿವಾದಕ್ಕೆ ಸಿಲುಕಿದೆ. ಕಂಪನಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮನ್ನು ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ ಹಾಗೂ ಮನೆಯ ಮೇಲೆ ಕೆಲ ದಿನಗಳ ಹಿಂದಷ್ಟೆ ಒಮ್ಮೆ ಕಸ್ಟಮ್ಸ್ ಅಧಿಕಾರಿಗಳು ಮತ್ತೊಮ್ಮೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಅವರಿಗೆ ಸೇರಿದ ಕೆಲವು ಕಾರುಗಳನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದರು. ಈಗ ಅವರ ನಿರ್ಮಾಣ ಸಂಸ್ಥೆಯ ವಿರುದ್ದ
ಕಾಸ್ಟಿಂಗ್ ಕೌಚ್ ಆರೋಪ ಹೊರಿಸಲಾಗಿದೆ. ಆರೋಪಕ್ಕೆ ಪ್ರತಿಯಾಗಿ ಕ್ರಮವನ್ನೂ ಸಹ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕೈಗೊಂಡಿದೆ.
ಯುವತಿಯೊಬ್ಬಾಕೆ ನೀಡಿರುವ ದೂರಿನಂತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವ ಧಿನಿಲ್ ಬಾಬು ಎಂಬಾತ ಯುವತಿಗೆ ಕರೆ ಮಾಡಿ, ತಾನು ದುಲ್ಕರ್ ಅವರ ವೇಫೇರರ್ ನಿರ್ಮಾಣ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದು ವೆಲ್ಫೈರ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಮುಂದಿನ ಸಿನಿಮಾನಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ, ವೇಫೇರರ್ ಪ್ರೊಡಕ್ಷನ್ ಹೌಸ್ ಬಳಿ ಇರುವ ಮನೆಯೊಂದಕ್ಕೆ ಬರಲು ಹೇಳಿದ್ದಾನೆ. ಬಳಿಕ ಯುವತಿಯನ್ನು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹಲ್ಲೆ ಮಾಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಸಿಗದಂತೆ ಮಾಡುವೆ ಎಂದು ಬೆದರಿಸಿದ್ದಾನೆ.
ಇನ್ನು, ಮಹಿಳೆ ನೀಡಿದ ದೂರಿನಲ್ಲಿ ಸಹಾಯಕ ನಿರ್ದೇಶಕ ಧಿನಿಲ್ ಬಾಬು ಅವರ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಥೇವರ ಪೊಲೀಸ್ ಠಾಣೆ ಮತ್ತು ಫೆಫ್ಕಾಗೆ ಅಧಿಕೃತ ವರದಿಗಳನ್ನು ಸಲ್ಲಿಸಿದ್ದು, ಧಿನಿಲ್ ಬಾಬು ಜೊತೆ ಕಂಪನಿ ಯಾವುದೇ ಸಂಬಂಧ ಹೊಂದಿಲ್ಲ. ಅವರ ಯಾವುದೇ ಯೋಜನೆಗಳಲ್ಲಿ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ