ರಾಜ್ಯಾದ್ಯಂತ ಮಳೆರಾಯನ ಆರ್ಭಟ ಮತ್ತೆ ಜೋರಾಗಿದೆ. ನಿನ್ನೆ ರಾತ್ರಿ ರಾಜಧಾನಿ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಜನರು ಬೆಚ್ಚಿಬಿದ್ದಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಇಡೀ ರಾತ್ರಿ ಜಾಗರಣೆ ಮಾಡುವಂತಾಗಿದೆ.
ಲಾಲ್ ಬಾಗ್ ರಸ್ತೆ, ಕಾರ್ಪೊರೇಷನ್, ಟೌನ್ ಹಾಲ್, ಜಯನಗರ, ಶಾಂತಿನಗರ, ಡಬ್ಬಲ್ ರೋಡ್ ಸೇರಿ ಸುತ್ತಮುತ್ತ ಸುರಿದ ಮಳೆಯಿಂದ ಮರಗಳು, ಕರೆಂಟ್ ಕಂಬಗಳು ಧರೆಗುರುಳಿವೆ. ಲಾಲ್ ಬಾಗ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದೆ. ಮರ ಬಿದ್ದಿರುವ ರಭಸಕ್ಕೆ ಪಕ್ಕದಲ್ಲಿದ್ದ ಕರೆಂಟ್ ಕಂಬ ಕೂಡ ಬಿದ್ದಿದೆ. ಪುಟ್‌ಪಾತ್ ಮೇಲೆ ಕರೆಂಟ್ ಕಂಬ ಬಿದ್ದಿದ್ರೂ, ಬೆಸ್ಕಾಂ ಸಿಬ್ಬಂದಿ ಇನ್ನೂ ತೆರವು ಮಾಡದಿರುವುದಕ್ಕೆ, ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ.
ಕೋರಮಂಗಲದ ಮೂರು ಕಡೆ, ಜಯನಗರ 4ನೇ ಹಂತದಲ್ಲಿ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೋರಮಂಗಲದ ಮಾರುತಿ ಕಲ್ಯಾಣ ಮಂಟಪದ ಬಳಿ ಬೈಕ್ ಮೇಲೆ ಮರ ಉರುಳಿ ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ಮತ್ತು ನಾಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ ಅಂತಾ, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ, ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ದೈತ್ಯಾಕಾರದ ಅಲೆಗಳು ಎಳುವ ಸಾಧ್ಯತೆ ಇದ್ದು, ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚನೆ ನೀಡಲಾಗಿದೆ.