ರೇಣುಕಾಸ್ವಾಮಿ ಕೇಸ್ ನಲ್ಲಿ ದರ್ಶನ್‌ಗೆ ಡಬಲ್ ಶಾಕ್ ಎದುರಾಗಿದೆ. ಜೈಲಲ್ಲಿಯೇ ಮತ್ತೊಂದು ಆಘಾತವಾಗಿದ್ದು, ತಂತ್ರ–ಪ್ರತಿ ತಂತ್ರದ ನಡುವೆ ಕೋರ್ಟ್‌ನಿಂದ ನಿರಂತರ ತಿರುಗುಬಾಣ ಬಿಳ್ತಾಯಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ವಿಚಾರಣೆಯಲ್ಲಿ ಬುಧವಾರ ಮಹತ್ವದ ಬೆಳವಣಿಗೆಗಳು ಸಂಭವಿಸಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಂಗಿರುವ ದರ್ಶನ್‌ಗೆ ಜೈಲಿಂದಲೇ ಹೊಸ ಆಘಾತ ಎದುರಾಗಿದೆ.
ವಿಚಾರಣೆ ವೇಳೆ ಆರೋಪಿ ಲಕ್ಷ್ಮಣ್ ಜೈಲಿನಲ್ಲಿನ ದಿನಚರಿ ಕಷ್ಟವಾಗುತ್ತಿರುವುದರಿಂದ ಕೊಠಡಿಯಲ್ಲಿ ಟಿವಿ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು, ದರ್ಶನ್ ಹಾಗೂ ಲಕ್ಷ್ಮಣ್ ಇರುವ ಬ್ಯಾರಕ್‌ನಲ್ಲಿ ಟಿವಿ ಅಳವಡಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಟಿವಿ ಅಳವಡಿಕೆಯಾಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದನ್ನೂ ಕೋರ್ಟ್ ಕಡ್ಡಾಯಗೊಳಿಸಿದೆ.
ಮೃತ ರೇಣುಕಾಸ್ವಾಮಿ ಅವರ ತಂದೆ ತಾಯಿ (CW-7 ಮತ್ತು CW-8) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸುವ ಕುರಿತು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಹೆಚ್ ಕೋರ್ಟ್ ಅಂಗೀಕರಿಸಿದೆ. ಈ ಪೋಷಕರು ಪ್ರಮುಖ ಸಾಕ್ಷಿಗಳಾಗಿರುವುದರಿಂದ ಡಿಸೆಂಬರ್ 17ರಂದು ಕೋರ್ಟ್‌ಗೆ ಹಾಜರಾಗಲು ಆದೇಶಿಸಲಾಗಿದೆ. ದರ್ಶನ್ ಪರ ವಕೀಲ ಸುನೀಲ್ ಅವರು ಸಲ್ಲಿಸಿದ್ದ ಆಕ್ಷೇಪ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಸಹಾಯಕ ವಿಶೇಷ ಸರ್ಕಾರಿ ಅಭಿಯೋಜಕ ಸಚಿನ್ ಅವರು ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಮೊದಲಿಗೆ ರೇಣುಕಾಸ್ವಾಮಿ ಪೋಷಕರನ್ನೇ ಪಾಟಿ ಸವಾಲಿಗೆ ಒಳಪಡಿಸಬೇಕಿರುವುದರಿಂದ ಸಮನ್ಸ್ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಆದರೆ, ಸಾಕ್ಷಿಗಳನ್ನು ‘ಪಿಕ್ ಅಂಡ್ ಚೂಸ್’ ವಿಚಾರಣೆ ನಡೆಸುವುದಕ್ಕೆ ಪ್ರಾಸಿಕ್ಯೂಷನ್‌ಗೆ ಅವಕಾಶವಿಲ್ಲ. ಕ್ರಮಾನುಸಾರವಾಗಿ ಸಾಕ್ಷಿಗಳನ್ನು ವಿಚಾರಿಸಬೇಕು ಎಂದು ಆರೋಪಿಗಳ ಪರ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ವರದಿ : ಲಾವಣ್ಯ ಅನಿಗೋಳ

