ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆಗಳು ಮತ್ತೆ ಜೋರಾಗಿವೆ. ಕಾಂಗ್ರೆಸ್ ಪಾಳಯದಲ್ಲಿ ಡಿಕೆ ಶಿವಕುಮಾರ್ ಬಣ ಮತ್ತು ಸಿದ್ದರಾಮಯ್ಯ ಬಣದ ನಡುವೆ ಮನಸ್ತಾಪ ಹೆಚ್ಚಾಗಿದೆ.
ಡಿಕೆಶಿ ಪರ ವಲಯ ಶಾಸಕರನ್ನು ತಮ್ಮ ಕಡೆಗೆ ತರಲು ಶ್ರಮಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಅಪ್ಪನ ನಾಯಕತ್ವವನ್ನು ಉಳಿಸಿಕೊಳ್ಳಲು ಅವರು ಹಿಂದಿನಿಂದಲೇ ಸಂಯೋಜನೆ ಮಾಡುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಯತೀಂದ್ರ ನೇರವಾಗಿ ಭೇಟಿ, ಮಾತುಕತೆ ಮತ್ತು ಸಮನ್ವಯ ನಡೆಸುತ್ತಿರುವುದು ಗಮನಾರ್ಹವಾಗಿದೆ. ಅಲ್ಲಿನ ಶಾಸಕರು ಸಿದ್ದರಾಮಯ್ಯನಿಗೆ ಬಲದಂತಿದ್ದಾರೆ ಎಂಬ ಭರವಸೆ ಯತೀಂದ್ರ ಕಟ್ಟುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಈ ಭೇಟಿಗಳು ಕೇವಲ ಶಿಷ್ಟಾಚಾರ ಭೇಟಿಗಳಲ್ಲ, ಭವಿಷ್ಯದ ರಾಜಕೀಯ ಸಮೀಕರಣಕ್ಕೂ ಸಂಬಂಧಿಸಿದೆ ಎಂದು ವದಂತಿ. ಯತೀಂದ್ರದ ಈ ಚಟುವಟಿಕೆ, ಸಿದ್ದರಾಮಯ್ಯ ನೇತೃತ್ವವನ್ನು ಬಲಪಡಿಸುವ “ಸೈಲೆಂಟ್ ಕ್ಯಾಂಪೈನ್” ಎಂದು ಕೆಲವರು ವಿವರಣೆ ನೀಡುತ್ತಿದ್ದಾರೆಡಿಕೆಶಿ ಪರ ಆಪ್ತರೂ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಒಳಗಡೆ ಅಸಮಾಧಾನ, ಒತ್ತಡ ಮತ್ತು ಜಗಳಗಳ ಲಕ್ಷಣಗಳು ಇದ್ದರೂ, ಇಬ್ಬರು ನಾಯಕರೂ—ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್—ಹೊರಗೆ ಒಂದೇ ಮಾತು ಹೇಳುತ್ತಿದ್ದಾರೆ- “ಹೈಕಮಾಂಡ್ ನಿರ್ಧಾರವೇ ಅಂತಿಮ.”
ಈ ನಡುವೆ ಹೊಸ ಚರ್ಚೆಗೆ ಕಾರಣವಾದದ್ದು ಭವಿಷ್ಯವಾಣಿ. ಗದುಗಿನ ಹುಲಿಗೆಯಮ್ಮ ಆರಾಧಕಿ ಬೈಲಮ್ಮ, ಇನ್ನೆರಡು ತಿಂಗಳಲ್ಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದು, ರಾಜಕೀಯ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಮತ್ತು ಇಂದು ಸಾಧು ಒಬ್ಬರು ಇದೇ ಮಾತನ್ನು ಹೇಳಿರುವುದು.
ದೆಹಲಿಯಲ್ಲಿ ಸಿಎಂ ಬದಲಾವಣೆ ಕುರಿತು ಖರ್ಗೆ ಮತ್ತು ರಾಹುಲ್ ಗಾಂಧಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ರಾಜ್ಯದ ಹಲವು ಶಾಸಕರು ಖರ್ಗೆಯನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ನೆನ್ನೆಯಷ್ಟೇ ಡಿಕೆಶಿ, ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯದ ಊಹಾಪೋಹಗಳಿಗೆ ಬಣ್ಣ ತುಂಬಿದೆ.
ಈ ಹಿನ್ನೆಲೆಯಲ್ಲಿ ಮುಖ್ಯ ಪ್ರಶ್ನೆಗಳು ಮತ್ತೆ ಜೀವಂತವಾಗಿವೆ—
ಸಿಎಂ ಕುರ್ಚಿ ಬದಲಾಗುತ್ತದೆಯಾ?
ಡಿಕೆಶಿಗೆ ಅವಕಾಶ ಸಿಕ್ಕಿ ಸಿಎಂ ಖುರ್ಚಿ ಹೇರುತ್ತಾರಾ?
ಅಥವಾ ಸಿದ್ದರಾಮಯ್ಯ ಸ್ಥಾನ ಗಟ್ಟಿಯಾಗಿಯೇ ಉಳಿಯುತ್ತದೆಯಾ?
ರಾಜ್ಯ ಕಾಂಗ್ರೆಸ್ ಒಳಗಿನ ಬೆಳವಣಿಗೆಗಳು ಮತ್ತಷ್ಟು ಆಸಕ್ತಿ ಹುಟ್ಟಿಸುತ್ತಿದ್ದು, ಮುಂದಿನ ದಿನಗಳು ರಾಜಕೀಯವಾಗಿ ನಿರ್ಣಾಯಕವಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




