Tuesday, October 14, 2025

Latest Posts

ಸುಪ್ರೀಂಕೋರ್ಟ್‌ ಕಟಕಟೆಗೆ ಬಾನು ಮುಷ್ತಾಕ್ ವಿರೋಧಿ ಹೋರಾಟ

- Advertisement -

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ದಿನಗಣನೆ ಇರುವಂತೆ, ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಆದರೆ, ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಕುರಿತು ವಿವಾದ ಮುಂದುವರಿದಿದೆ. ಈ ಹಿಂದೆ ಹೈಕೋರ್ಟ್‌ನಲ್ಲಿ ಈ ವಿಚಾರದ ಮೇಲೆ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿ, ಸರ್ಕಾರದ ನಿರ್ಧಾರದಲ್ಲಿ ಯಾವುದೇ ಕಾನೂನಾತ್ಮಕ ಅಸಂಗತತೆ ಇಲ್ಲವೆಂದು ತೀರ್ಪು ನೀಡಲಾಗಿತ್ತು.

ಈಗಾಗಲೇ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ನಿವಾಸಿ ಎಚ್.ಎಸ್. ಗೌರವ್ ಅವರು ಸುಪ್ರೀಂಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿ, ಹಿಂದೂಯೇತರರನ್ನು ಚಾಮುಂಡೇಶ್ವರಿ ಪೂಜೆಗೆ ಆಹ್ವಾನಿಸುವುದು ಪರಂಪರೆಗೆ ವಿರುದ್ಧವೆಂದು ವಾದಿಸಿದ್ದಾರೆ. ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿಮಾಡುವಂತೆ ಮನವಿ ಮಾಡಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠವು ಅದಕ್ಕೆ ಒಪ್ಪಿಗೆ ನೀಡಿದೆ. ಈಗ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಸಜ್ಜಾಗಿದೆ.

ಇದರ ನಡುವೆಯೇ, ರಾಜ್ಯ ಸರ್ಕಾರ ದಸರಾ ಕೇವಲ ಧಾರ್ಮಿಕ ಉತ್ಸವವಲ್ಲ, ಬದಲಾಗಿ ನಾಡಿನ ಸಾಂಸ್ಕೃತಿಕ ಹಬ್ಬವಾಗಿದೆ ಎಂಬ ನಿಲುವನ್ನು ಮುಂದಿರಿಸಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯೊಂದಿಗೆ ಮೈಸೂರು ದಸರಾ ಎಲ್ಲರ ಪಾಲಿಗೂ ಸೇರಿರುವ ಹಬ್ಬವಾಗಿದ್ದು, ಎಲ್ಲ ಸಮುದಾಯಗಳೂ ಇದರ ಅಂಗವಾಗಿರಬಹುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.‌

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss