www.karnatakatv.net :ತುಮಕೂರು : ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಎತ್ತಿನಹೊಳೆ ಯೋಜನೆಯಡಿ ಡ್ಯಾಂ ನಿರ್ಮಾಣ ಮಾಡದಿದ್ದಲ್ಲಿ ಮಂಚನ ಬೆಲೆ ಕಾಮಗಾರಿ ಹಾಗೂ ಎತ್ತಿನಹೊಳೆ ಕಾಮಗಾರಿಗೆ ನಮ್ಮ ಮಠದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ತುಮುಲ್ ಕಲ್ಯಾಣ ಟ್ರಸ್ಟ್ ಮತ್ತು ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ನಿಂದ ಮೃತಪಟ್ಟ ಫಲಾನುಭವಿಗಳಿಗೆ ಚೆಕ್ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ರೈತರ ಪರವಾಗಿರಬೇಕು ಆಗ ಮಾತ್ರ ರೈತರ ಅಭಿವೃದ್ದಿ ಸಾಧ್ಯ ಎಂದರು.
ಎತ್ತಿನ ಹೊಳೆ ಯೋಜನೆ ಕಾಮಗಾರಿಯ ಪೈಪ್ಲೈನ್ ನಮ್ಮ ಮಠದ ಜಮೀನಿನ ಮೂಲಕವೇ ಹಾದು ಹೋಗಲಿದ್ದು, ಬೈರಗೊಂಡ್ಲು ಬಳಿ ಡ್ಯಾಂ ನಿರ್ಮಿಸದಿದ್ದಲ್ಲಿ ಜಮೀನು ಕೊಡುವುದಿಲ್ಲ. ಇನ್ನು ಕೋವಿಡ್ ಮಹಾಮಾರಿ ಸಂಕಷ್ಟದಲ್ಲೂ ಹೈನುಗಾರಿಕೆ, ರೈತರ ಕೈಹಿಡಿದಿದ್ದು, ಹೈನುಗಾರಿಕೆಯಿಂದಾಗಿ ಬಹಳಷ್ಟು ರೈತರು ಆರ್ಥಿಕವಾಗಿ ಸಬಲೀಕರಣವಾಗಿದ್ದಾರೆ ಎಂದರು.
ಮಾಜಿ ಡಿಸಿಎಂ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಗೆ ತಂದು ಇದಕ್ಕೆ 13500 ಕೋಟಿ ರೂಗಳನ್ನು ಮೀಸಲಿರಿಸಲಾಗಿತ್ತು. ಈ ಯೋಜನೆಯಲ್ಲಿ ಕೊರಟಗೆರೆಯ ಬೈರಗೊಂಡ್ಲು ಬಳಿ ಡ್ಯಾಂ ನಿಮಾಣ ಮಾಡಿ 5 ಟಿಎಂಸಿ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು ಎಂದರು
ಬೈರಗೊಂಡ್ಲು ಡ್ಯಾಂ ವಿಚಾರದಲ್ಲಿ ರಾಜಕೀಯ ಬೆರೆಸಿದ್ದು, ದೊಡ್ಡಬಳ್ಳಾಪುರ ರೈತರಿಗೆ ಎಕರೆಗೆ 32 ಲಕ್ಷ ಹಣ ನಿಗದಿ ಮಾಡಿದ್ದು, ಕೊರಟಗೆರೆ ರೈತರಿಗೆ ಕೇವಲ 8 ರಿಂದ 10 ಲಕ್ಷ ಹಣ ನಿಗದಿ ಮಾಡಲಾಗಿದೆ. ಇದರಿಂದ ನಮ್ಮ ಭಾಗದ ರೈತರಿಗೆ ಅನ್ಯಾಯವಾಗುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಬೈರಗೊಂಡು ಬಳಿ ಡ್ಯಾಂ ನಿರ್ಮಾಣವನ್ನೇ ಕೈ ಬಿಡುವ ಚಿಂತನೆ ನಡೆಸುತ್ತಿದ್ದು, ಇಂತಹ ಕೀಳು ರಾಜಕೀಯ ಮಾಡುವುದು ಸರಿಯಲ್ಲಎಂದು ಹರಿಹಾಯ್ದರು
ಕಾರ್ಯಕ್ರಮದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಯಲು ಪರಮೇಶ್ವರ್ ಕಾರಣ. ನೀರು ಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಧುಗಿರಿ ಉಪವಿಭಾಗಕ್ಕೆ 120 ವರ್ಷಗಳ ಇತಿಹಾಸವಿದ್ದು, ಕಂದಾಯ ಜಿಲ್ಲೆಯಾದಾಗ ಮಾತ್ರ ಮಧುಗಿರಿ ಅಭಿವೃದ್ದಿ ಸಾಧ್ಯ ಎಂದರು
ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಈ ಹಿಂದೆ ತುಮುಲ್ನಲ್ಲಿ ರೈತರಿಗೆ ಬಟವಾಡೆ ನೀಡಲೂ ಸಹ ಹಣವಿರಲಿಲ್ಲ. ಇಂದು ಪ್ರತೀ ವಾರ ಸುಮಾರು 19 ಕೋಟಿ ರೂ ರೈತರ ಖಾತೆಗೆ ಜಮೆಯಾಗುತ್ತಿದೆ. ಕೋವಿಡ್ ನಿಂದ ಮೃತಪಟ್ಟ ಹಾಲು ಉತ್ಪಾದಕ ರೈತರಿಗೆ 1 ಲಕ್ಷ, ಸಹಜ ಸಾವಿನ ಕುಟುಂಬಗಳಿಗೆ 50 ಸಾವಿರ ರೂಗಳ ಪರಿಹಾರ ನೀಡಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಜಿ,ಪಂ ಸದಸ್ಯ ಕೆಂಚಮಾರಯ್ಯ, ತುಮುಲ್ ಅಧ್ಯಕ್ಷ ಸಿ.ವಿ. ಮಹಲಿಂಗಯ್ಯ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು